ಮಾಂಧಾತಾ
ರಾಜಾ ಮಾಂಧಾತನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೨೬) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು.
ಇಕ್ಷ್ವಾಕು ವಂಶದಲ್ಲಿ ಯುವನಾಶ್ವ (ಸೌದ್ಯುಮ್ನಿ) ಎನ್ನುವ ಮಹೀಪತಿಯು ಹುಟ್ಟಿದ್ದನು. ಆ ಪೃಥ್ವೀಪಾಲನು ಭೂರಿದಕ್ಷಿಣೆಗಳನ್ನೊಡಗೂಡಿದ ಕ್ರತುವಿಗೆ ಯಜಮಾನನಾಗಿದ್ದನು. ಧರ್ಮಭೃತರಲ್ಲಿ ಶ್ರೇಷ್ಠನಾದ ಅವನು ಸಾವಿರ ಅಶ್ವಮೇಧಗಳನ್ನು ಪೂರೈಸಿ, ಇನ್ನೂ ಇತರ ಪ್ರಮುಖ ಕ್ರತುಗಳನ್ನು ಆಪ್ತರು ಮತ್ತು ದಕ್ಷಿಣೆಗಳೊಂದಿಗೆ ಕೈಗೊಂಡನು. ಆದರೆ ಆ ದೃಢವ್ರತ ಮಹಾತ್ಮ ರಾಜರ್ಷಿಗೆ ಮಕ್ಕಳಿರಲಿಲ್ಲ. ಆ ರಾಜ್ಯವನ್ನು ಮಂತ್ರಿಗಳಿಗೊಪ್ಪಿಸಿ ಅವನು ವನದಲ್ಲಿಯೇ ನಿತ್ಯ ವಾಸಿಸತೊಡಗಿದನು. ತನ್ನನ್ನು ಶಾಸ್ತ್ರಗಳಲ್ಲಿ ಹೇಳಿದ ವಿಧಿಗಳಿಗೆ ತೊಡಗಿಸಿಕೊಂಡು, ಬಾಯಾರಿಕೆಯಿಂದ ಒಣಗಿದ ಹೃದಯದವನಾಗಿ ಅವನು ಭೃಗುವಿನ ಆಶ್ರಮವನ್ನು ಪ್ರವೇಶಿಸಿದನು. ಅದೇ ರಾತ್ರಿ ಮಹಾತ್ಮ ಮಹರ್ಷಿ ಭೃಗುನಂದನನು ಸೌದ್ಯುಮ್ನಿಗೆ ಮಕ್ಕಳಾಗಲೆಂಬ ಕಾರಣದಿಂದ ಯಾಗವನ್ನು ನಡೆಸಿದ್ದನು. ಒಂದು ದೊಡ್ಡ ಕಲಶದಲ್ಲಿ ನೀರನ್ನು ತುಂಬಿ ಮಂತ್ರಗಳಿಂದ ಶುದ್ಧೀಕರಿಸಲಾಗಿತ್ತು. ಅದನ್ನು ಕುಡಿದು ಅವನ ಪತ್ನಿಯು ಶಕ್ರನ ಸಮನಾದ ಮಗನನ್ನು ಪಡೆಯಲೆಂದು ಮೊದಲೇ ಮಂತ್ರಗಳಿಂದ ಶುದ್ದೀಕರಿಸಿದ ನೀರನ್ನು ದೊಡ್ಡ ಕಲಶದಲ್ಲಿ ತುಂಬಿಸಿಡಲಾಗಿತ್ತು. ಅದನ್ನು ವೇದಿಕೆಯ ಮೇಲಿಟ್ಟು ರಾತ್ರಿಯಿಡೀ ಜಾಗರಣೆ ಮಾಡಿ ಆಯಾಸಗೊಂಡಿದ್ದ ಮಹರ್ಷಿಗಳು ಮಲಗಿದ್ದಾಗ ಅಲ್ಲಿಗೆ ಸೌದ್ಯುಮ್ನಿಯು ಬಂದನು. ಅ ರಾಜನು ಕಂಠವೊಣಗಿ, ಅತಿ ಬಾಯಾರಿಕೆಯಿಂದ ನೀರನ್ನು ಅರಸುತ್ತಾ ಆ ಆಶ್ರಮವನ್ನು ಆಯಾಸದಿಂದ ಪ್ರವೇಶಿಸಿ ನೀರನ್ನು ಕೇಳಿದನು. ಆದರೆ ಒಣಗಿದ ಕಂಠದಿಂದ ನೀರನ್ನು ಯಾಚಿಸಿದ ಆಯಾಸಗೊಂಡ ರಾಜನ ಕೂಗು ಯಾರಿಗೂ ಕೇಳಲಿಲ್ಲ. ಅದು ಹಕ್ಕಿಯ ಕೂಗಿನಂತೆ ಕ್ಷೀಣವಾಗಿತ್ತು. ಆಗ ನೀರಿನಿಂದ ತುಂಬಿದ್ದ ಕಲಶವನ್ನು ನೋಡಿ ಆ ರಾಜನು ಬೇಗನೆ ಅಲ್ಲಿಗೆ ಓಡಿ ಹೋಗಿ ನೀರನ್ನು ಕುಡಿದು ಉಳಿದುದನ್ನು ಚೆಲ್ಲಿದನು. ಆ ತಣ್ಣಗಿನ ನೀರನ್ನು ಕುಡಿದು ಬಾಯಾರಿಸಿಕೊಂಡ ಧೀಮಂತ ರಾಜನು ಸಂತೋಷದಿಂದ ಅಲ್ಲಿಯೇ ಗಾಢ ನಿದ್ರೆ ಮಾಡಿದನು.
ರಾಜನೊಂದಿಗೆ ಎಚ್ಚರಗೊಂಡ ಋಷಿಗಳು ಎಲ್ಲರೂ ಕಲಶದಿಂದ ನೀರು ಬರಿದಾಗಿದ್ದುದನ್ನು ಕಂಡರು. ಅವರೆಲ್ಲರೂ ಒಟ್ಟಿಗೆ “ಇದು ಯಾರ ಕಾರ್ಯ?” ಎಂದು ಕೇಳಲು ಯುವನಾಶ್ವನು “ನಾನೇ ಅದನ್ನು ಮಾಡಿದ್ದುದು” ಎಂದು ಸತ್ಯವನ್ನು ಹೇಳಿದನು. ಆಗ ಭಗವಾನ್ ಭಾರ್ಗವನು “ಅದು ಸರಿಯಲ್ಲ! ಈ ನೀರನ್ನು ತಪಸ್ಸಿನಿಂದ ಸಂಗ್ರಹಿಸಿ ನಿನ್ನ ಮಗನಿಗೋಸ್ಕರವಾಗಿ ಇಡಲಾಗಿತ್ತು” ಎಂದನು. “ರಾಜರ್ಷೇ! ನಿನಗೆ ಮಹಾಬಲ ಪರಾಕ್ರಮಿಯಾದ ಮಗನಾಗಲೆಂದು ದಾರುಣವಾದ ತಪಸ್ಸಿನ ನಂತರ ಒಬ್ಬ ಬ್ರಾಹ್ಮಣನನ್ನು ಅದಕ್ಕೆ ನಿಯೋಗಿಸಿದ್ದೆ. ತನ್ನ ವೀರ್ಯದಿಂದ ಶಕ್ರನನ್ನೂ ಯಮಸದನಕ್ಕೆ ಕಳುಹಿಸಬಲ್ಲ ತಪೋಬಲಸಮನ್ವಿತನಾದ, ಮಹಾಬಲಶಾಲಿ, ಮಹಾವೀರ ಮಗನಿಗಾಗಿ. ಈ ವಿಧಿಯಿಂದ ಅದನ್ನು ತಯಾರಿಸಿದ್ದೆ. ಇಂದು ನೀನು ಅದನ್ನು ಕುಡಿದಿದ್ದುದು ಸರಿಯಲ್ಲ! ಆದರೆ ಇಂದು ನೀನು ಮಾಡಿದ್ದುದನ್ನು ಬೇರೆಯಾಗಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ನೀನು ಏನು ಮಾಡಿದೆಯೋ ಅದು ದೈವವೇ ನಡೆಸಿದ್ದುದು. ವಿಧಿವತ್ತಾಗಿ ಮಂತ್ರ ಪುರಸ್ಕೃತಗೊಂಡ ನನ್ನ ತಪೋವೀರ್ಯದಿಂದ ತುಂಬಿದ ಆ ನೀರನ್ನು ಬಾಯಾರಿಕೆಯಿಂದ ನೀನು ಕುಡಿದಿದ್ದುದರಿಂದ ಅಂಥಹ ಮಹಾವೀರ ಪುತ್ರನು ನಿನ್ನಲ್ಲಿಯೇ ಹುಟ್ಟುತ್ತಾನೆ. ಈ ಪರಮಾದ್ಭುತ ಇಷ್ಟಿಯನ್ನು ನಿನಗೋಸ್ಕರ ನಾವೇ ಮಾಡುತ್ತೇವೆ. ಇದರಿಂದ ವೀರ್ಯವಂತ ನೀನು ಇಂದ್ರಸಮ ಮಗನಿಗೆ ಜನ್ಮನೀಡುತ್ತೀಯೆ.”
ಒಂದು ನೂರು ವರ್ಷಗಳು ತುಂಬಿದ ನಂತರ ಆ ಮಹಾತ್ಮ ರಾಜನ ಎಡಭಾಗವು ಸೀಳಿ ಇನ್ನೊಬ್ಬ ಸೂರ್ಯನಂತೆ ಪ್ರಕಾಶಿಸುವ ಮಹಾತೇಜಸ್ವಿ ಮಗನು ಹೊರಬಂದನು. ಆದರೆ ನರಪತಿ ಯುವನಾಶ್ವನು ಸಾಯಲಿಲ್ಲ ಎನ್ನುವುದೇ ಅದಕ್ಕಿಂತಲೂ ಅದ್ಭುತವಾಗಿದ್ದಿತು. ಆಗ ಮಹಾತೇಜಸ್ವಿ ಇಂದ್ರನು ಅವನನ್ನು ನೋಡಲು ಬಂದನು. ಇಂದ್ರನು ತನ್ನ ತೋರುಬೆರಳನ್ನು ಆ ಶಿಶುವಿನ ಬಾಯಲ್ಲಿಟ್ಟು ಹೇಳಿದನು: “ಇವನು ನನ್ನಿಂದ ಪೋಷಣೆಯನ್ನು ಪಡೆಯಲಿ!” ಆದುದರಿಂದ ಇಂದ್ರನೊಂದಿಗೆ ಇತರ ದೇವತೆಗಳು ಅವನಿಗೆ ಮಾಂಧಾತ ಎಂಬ ಹೆಸರನ್ನಿತ್ತರು. ಇಂದ್ರನು ನೀಡಿದ ತೋರುಬೆರಳನ್ನು ಚೀಪಿದ ಆ ಶಿಶುವು ಹದಿಮೂರು ಕಿಷ್ಕೂಣದಷ್ಟು ಬೆಳೆಯಿತು. ಧನುರ್ವೇದದೊಂದಿಗೆ ವೇದಗಳು, ದಿವ್ಯಾಸ್ತ್ರಗಳು ಎಲ್ಲವೂ ಆ ರಾಜನಿಗೆ, ಕೇವಲ ನೆನೆಸಿಕೊಂಡಿದ್ದಕ್ಕೇ, ಕಾಣಿಸಿಕೊಂಡವು. ಅಜಗವ ಎಂಬ ಹೆಸರಿನ ಧನುಸ್ಸು, ಶೃಂಗದಿಂದ ಮಾಡಲ್ಪಟ್ಟ ಬಾಣ, ಮತ್ತು ಅಭೇದ್ಯ ಕವಚಗಳು ತಕ್ಷಣವೇ ಅವನ ವಶವಾದವು. ಮಘವತ ಇಂದ್ರನೇ ಅವನನ್ನು ಅಭಿಷೇಕಿಸಿದನು ಮತ್ತು ವಿಕ್ರಮದಿಂದ ವಿಷ್ಣುವು ಹೇಗೋ ಹಾಗೆ ಧರ್ಮದಿಂದ ಮೂರು ಲೋಕಗಳನ್ನೂ ಗೆದ್ದನು. ಆ ಮಹಾತ್ಮನ ಚಕ್ರವು ಅಪ್ರತಿಹತವಾಗಿ ಉರುಳಿತು ಮತ್ತು ತಮ್ಮ ಇಚ್ಛೆಯಿಂದಲೇ ರತ್ನಗಳು ರಾಜರ್ಷಿಗೆ ಬಂದು ಸೇರಿದವು. ಸಂಪತ್ತಿನಿಂದ ತುಂಬಿದ ಈ ಭೂಮಿಯು ಸಂಪೂರ್ಣವಾಗಿ ಅವನದ್ದಾಗಿತ್ತು. ಬಹಳಷ್ಟು ದಕ್ಷಿಣೆಗಳಿಂದ ಕೂಡಿದ ಅನೇಕ ವಿವಿಧ ಯಜ್ಞಗಳನ್ನು ಅವನು ನೆರವೇರಿಸಿದನು. ಸಾಕಷ್ಟು ಯಾಗಚೈತ್ಯಗಳನ್ನು ಮತ್ತು ಧರ್ಮವನ್ನು ಸಂಪಾದಿಸಿದ ಆ ಮಹಾತೇಜಸ್ವಿ ಅಮಿತದ್ಯುತಿಯು ಇಂದ್ರನ ಅರ್ಧ ಸಿಂಹಾಸನವನ್ನು ಪಡೆದನು. ಆ ಧರ್ಮನಿತ್ಯ ಧೀಮಂತನು ಒಂದೇ ಒಂದು ದಿನದಲ್ಲಿ ರತ್ನಗಳ ಗಣಿ ಮತ್ತು ಪಟ್ಟಣಗಳೊಡನೆ ಇಡೀ ಭೂಮಿಯನ್ನೇ ತನ್ನ ಶಾಸನದಡಿಯಲ್ಲಿ ತಂದನು. ನಾಲ್ಕು ಮೂಲೆಗಳನ್ನು ಹೊಂದಿದ್ದ ಭೂಮಿಯು ಭೂರಿದಕ್ಷಿಣೆಗಳಿಂದ ಅವನು ನೆರವೇರಿಸಿದ್ದ ಕ್ರತುಗಳ ಯಾಗವೇದಿಕೆಗಳಿಂದ ತುಂಬಿಹೋಗಿತ್ತು. ಒಂದು ಸ್ಥಳವೂ ಬಿಟ್ಟಿರಲಿಲ್ಲ. ಆ ಮಹಾತ್ಮನು ಸಹಸ್ರಾರು ಪದ್ಮಗಳಷ್ಟು ಹಸುಗಳನ್ನು ಬ್ರಾಹ್ಮಣರಿಗೆ ದಾನವನ್ನಾಗಿತ್ತ ಎಂದು ಹೇಳುತ್ತಾರೆ. ಹನ್ನೆರಡು ವರ್ಷಗಳ ಅನಾವೃಷ್ಟಿಯಾದಾಗ ಆ ಮಹಾತ್ಮನು ಸಸ್ಯಗಳು ಬೆಳೆಯಲೋಸುಗ ಇಂದ್ರನು ನೋಡುತ್ತಿದ್ದಂತೆಯೇ ಮಳೆಯನ್ನು ಸುರಿಸಿದನು. ಆ ಸೋಮಕುಲೋತ್ಪನ್ನನು ಮಹಾಮೇಘಗಳಂತಿರುವ ಬಾಣಗಳಿಂದ ಮಹಾ ಗಾಂಧಾರಾಧಿಪತಿಯನ್ನು ವಶಪಡಿಸಿಕೊಂಡನು. ಆ ಮಹಾತ್ಮನು ಚತುರ್ವಿಧ ಪ್ರಜೆಗಳನ್ನು ಗೆದ್ದು ಆತ್ಮತಪಸ್ಸಿನ ತೇಜಸ್ಸಿನಿಂದ ಲೋಕಗಳಲ್ಲಿ ತನ್ನ ಶಾಸನವನ್ನು ಸ್ಥಾಪಿಸಿದನು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ