ಮಾತಲಿ ವರಾನ್ವೇಷಣೆ
ಮಾತಲಿಯು ತನ್ನ ಮಗಳಿಗೆ ವರನನ್ನು ಹುಡುಕಿದ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೯೫-೧೦೩) ದಲ್ಲಿ ಬರುತ್ತದೆ. ಶ್ರೀಕೃಷ್ಣನು ಸಂಧಿಗೆಂದು ಕುರುಸಭೆಗೆ ಹೋದಾಗ ಅಲ್ಲಿ ಋಷಿ ಕಣ್ವನು ವಿಷ್ಣುವಿನ ಘನತೆಯನ್ನು ಸಾರುವ ಈ ಕಥೆಯನ್ನು ದುರ್ಯೋಧನನಿಗೆ ಹೇಳಿದನು.
ತ್ರೈಲೋಕ್ಯರಾಜ ಇಂದ್ರನ ಸಾರಥಿಯ ಹೆಸರು ಮಾತಲಿ. ಅವನ ಕುಲದಲ್ಲಿ ರೂಪದಲ್ಲಿ ಲೋಕವಿಶ್ರುತ ಒಬ್ಬಳೇ ಕನ್ಯೆಯಿದ್ದಳು. ಗುಣಕೇಶೀ ಎಂಬ ಹೆಸರಿನಿಂದ ವಿಖ್ಯಾತಳಾಗಿ ಆ ದೇವರೂಪಿಣಿಯು ಕಾಂತಿ-ಸೌಂದರ್ಯಗಳಲ್ಲಿ ಇತರ ಸ್ತ್ರೀಯರನ್ನು ಮೀರಿಸಿದ್ದಳು. ಅವಳನ್ನು ಕೊಡುವ ಸಮಯವು ಬಂದಿದೆಯೆಂದು ತಿಳಿದ ಮಾತಲಿಯು ಭಾರ್ಯೆಯೊಂದಿಗೆ ಚಿಂತೆಗೊಳಗಾಗಿ ಮುಂದೆ ಏನು ಮಾಡಬೇಕೆಂದು ಯೋಚಿಸಿದನು. “ಉತ್ತಮ ಶೀಲವುಳ್ಳ, ಯಶಸ್ವಿಗಳ, ಸತ್ವಯುತವಾದ ಉಚ್ಛಕುಲದಲ್ಲಿ ಕನ್ಯೆಯು ಜನಿಸಿದರೇ ಸಮಸ್ಯೆಯಲ್ಲವೇ? ಗೌರಾವಾನ್ವಿತ ಕುಲದಲ್ಲಿ ಜನಿಸಿದ ಕನ್ಯೆಯು ಮೂರು ಕುಲಗಳ ಗೌರವಕ್ಕೆ ಧಕ್ಕೆ ತರಬಹುದು - ತಾಯಿಯ ಕುಲ, ತಂದೆಯ ಕುಲ ಮತ್ತು ಅವಳನ್ನು ತೆಗೆದುಕೊಂಡವರ ಕುಲ. ನನ್ನ ಮನಸ್ಸಿನ ಕಣ್ಣಿನಿಂದ ದೇವ-ಮಾನುಷ ಲೋಕಗಳೆರಡನ್ನೂ ನೋಡಿದರೆ ಅಲ್ಲಿ ನನಗೆ ಇಷ್ಟವಾದ ವರನು ಕಾಣಿಸುತ್ತಿಲ್ಲ.”
ದೇವತೆಗಳಲ್ಲಿ, ದೈತ್ಯರಲ್ಲಿ, ಗಂಧರ್ವರಲ್ಲಿ, ಮನುಷ್ಯರಲ್ಲಿ ಮತ್ತು ಹಾಗೆಯೇ ಬಹುಸಂಖ್ಯೆಯ ಋಷಿಗಳಲ್ಲಿಯೂ ಅವನಿಗೆ ಅಳಿಯನನ್ನಾಗಿ ಮಾಡಿಕೊಳ್ಳಲು ಯಾರೂ ಇಷ್ಟವಾಗಲಿಲ್ಲ. ಅನಂತರ ಮಾತಲಿಯು ತನ್ನ ಪತ್ನಿ ಸುಧರ್ಮೆಯೊಡನೆ ರಾತ್ರಿ ಸಮಾಲೋಚನೆ ಮಾಡಿ, ನಾಕಲೋಕಕ್ಕೆ ಹೋಗಲು ಮನಸ್ಸುಮಾಡಿದನು. “ದೇವ-ಮನುಷ್ಯರಲ್ಲಿ ನನಗೆ ರೂಪದಲ್ಲಿ ಗುಣಕೇಶಿಯ ಸಮನಾದ ವರನು ಕಾಣುವುದಿಲ್ಲ. ಒಂದುವೇಳೆ ನಾಗರಲ್ಲಿ ಇದ್ದರೂ ಇರಬಹುದು!” ಹೀಗೆ ಯೋಚಿಸಿ, ಸುಧರ್ಮೆಗೆ ಪ್ರದಕ್ಷಿಣೆ ಮಾಡಿ, ಕನ್ಯೆಯ ಶಿರವನ್ನು ಆಘ್ರಾಣಿಸಿ ಮಹೀತಲವನ್ನು ಪ್ರವೇಶಿಸಿದನು.
ಮಾರ್ಗದಲ್ಲಿ ಮುಂದುವರೆಯುತ್ತಿರುವಾಗ ಮಾತಲಿಯು ವರುಣನನ್ನು ಕಾಣಲು ಬಯಸಿ ಹೋಗುತ್ತಿರುವ ಮಹರ್ಷಿ ನಾರದನನ್ನು ಭೇಟಿ ಮಾಡಿದನು. ಆಗ ನಾರದನು ಅವನನ್ನು ಕೇಳಿದನು: “ಸೂತ! ನೀನು ಎಲ್ಲಿಗೆ ಹೋಗುತ್ತಿರುವೆ? ನಿನ್ನದೇ ಕಾರಣಕ್ಕೆ ಅಥವಾ ಶತಕ್ರತುವಿನ ಶಾಸನದಂತೆ ಹೋಗುತ್ತಿದ್ದೀಯೋ?”
ದಾರಿಯಲ್ಲಿ ಹೋಗುತ್ತಿರುವಾಗ ನಾರದನಿಂದ ಹೀಗೆ ಪ್ರಶ್ನಿಸಲ್ಪಟ್ಟ ಮಾತಲಿಯು ಅವನಿಗೆ ವರುಣನಲ್ಲಿ ತನಗಿರುವ ಕೆಲಸದ ಕುರಿತು ಎಲ್ಲವನ್ನೂ ಹೇಳಿದನು. ಆಗ ಆ ಮನಿಯು ಅವನಿಗೆ “ಇಬ್ಬರೂ ಒಟ್ಟಿಗೇ ಹೋಗೋಣ! ನಾನೂ ಕೂಡ ಸಲಿಲೇಶನನ್ನು ಕಾಣಲು ದಿವದಿಂದ ಇಳಿದು ಬಂದಿದ್ದೇನೆ. ವಸುಧಾತಲವನ್ನು ನೋಡುತ್ತಾ ನಾನು ನಿನಗೆ ಎಲ್ಲವನ್ನೂ ಹೇಳುತ್ತೇನೆ. ಮಾತಲಿ! ಅಲ್ಲಿ ನೋಡಿ ಯಾರಾದರೂ ವರನನ್ನು ಆರಿಸೋಣ!”
ಆಗ ಮಾತಲಿ-ನಾರದರಿಬ್ಬರೂ ಭೂಮಿಯನ್ನು ಹೊಕ್ಕು ಲೋಕಪಾಲಕ ಅಪಾಂಪತಿಯನ್ನು ಕಂಡರು. ಅಲ್ಲಿ ನಾರದನು ದೇವರ್ಷಿಗೆ ತಕ್ಕುದಾದ ಪೂಜೆಯನ್ನೂ, ಮಾತಲಿಯು ಮಹೇಂದ್ರನಿಗೆ ತಕ್ಕುದಾದ ಪೂಜೆಯನ್ನೂ ಪಡೆದರು. ಅವರಿಬ್ಬರೂ ಸಂತೋಷಗೊಂಡು ತಮ್ಮ ಕಾರ್ಯದ ಕುರಿತು ನಿವೇದಿಸಿದರು. ನಂತರ ವರುಣನ ಅಪ್ಪಣೆಯನ್ನು ಪಡೆದು ನಾಕಲೋಕದಲ್ಲಿ ಸಂಚರಿಸಿದರು. ಭೂಮಿಯ ಒಳಗೆ ನಿವಾಸಿಸುತ್ತಿರುವ ಎಲ್ಲರನ್ನೂ ತಿಳಿದಿದ್ದ ನಾರದನು ಎಲ್ಲರ ಕುರಿತೂ ವಿವರಿಸುತ್ತಾ ಹೋದನು.
ನಾರದನು ಹೇಳಿದನು: “ಅಯ್ಯಾ! ನೀನು ಪುತ್ರಪೌತ್ರರಿಂದ ಆವೃತನಾಗಿರುವ ವರುಣನನ್ನು ನೋಡಿದೆ. ಸರ್ವತೋಭದ್ರವಾಗಿರುವ ಸಮೃದ್ಧವಾಗಿರುವ ಉದಕಪತಿಯ ಸ್ಥಾನವನ್ನು ನೋಡು! ಇವನು ಗೋಪತಿ ವರುಣನ ಮಹಾಪ್ರಾಜ್ಞ ಮಗ. ಅವನು ಶೀಲದಲ್ಲಿ, ಶೌಚದಲ್ಲಿ ವಿಶಿಷ್ಟನಾಗಿದ್ದಾನೆ. ಪುಷ್ಕರೇಕ್ಷಣ ಈ ಪುಷ್ಕರನು ಅವನ ಪ್ರೀತಿಪಾತ್ರ ಮಗ - ರೂಪವಂತ, ಸುಂದರ. ಇವನನ್ನು ಸೋಮನ ಪುತ್ರಿಯು ಪತಿಯನ್ನಾಗಿ ವರಿಸಿದ್ದಾಳೆ. ರೂಪದಲ್ಲಿ ಲಕ್ಷ್ಮಿಗೆ ಎರಡನೆಯವಳಾಗಿರುವ ಅವಳನ್ನು ಜ್ಯೋತ್ಸ್ನಾಕಾಲೀ ಎಂದು ಕರೆಯುತ್ತಾರೆ. ಹಿಂದೆ ಅವಳು ಅದಿತಿಯ ಶೇಷ್ಠ ಪುತ್ರನನ್ನು ಪತಿಯನ್ನಾಗಿ ವರಿಸಿದ್ದಳೆಂದು ಕೇಳಿದ್ದೇವೆ. ಎಲ್ಲೆಡೆಯೂ ಕಾಂಚನದಿಂದ ಕೂಡಿದ ವರುಣನ ಭವನವನ್ನು ನೋಡು! ಸುರಪತಿಯ ಸಖನಲ್ಲಿರುವ ಸುರೆಯನ್ನು ಕುಡಿದು ಸುರರು ಸುರತ್ವವನ್ನು ಪಡೆದರು. ನೀನು ನೋಡುತ್ತಿರುವ ಈ ದೀಪ್ಯಮಾನ ಆಯುಧಗಳೆಲ್ಲವೂ ರಾಜ್ಯವನ್ನು ಕಳೆದುಕೊಂಡ ದೈತ್ಯರಿಗೆ ಸೇರಿದವು. ಈ ಆಯುಧಗಳು ಅಕ್ಷಯವಾದವುಗಳು: ಶತ್ರುಗಳ ಮೇಲೆ ಪ್ರಯೋಗಿಸುವವನ ಕೈಗೇ ಹಿಂದಿರುಗಿ ಬಂದು ಸೇರುತ್ತವೆ. ಸುರರು ಗೆದ್ದಿರುವ ಈ ಆಯುಧವನ್ನು ಪ್ರಯೋಗಿಸಲು ಅನುಭವವಿರಬೇಕಾಗುತ್ತದೆ. ಹಿಂದೆ ಇಲ್ಲಿ ದಿವ್ಯಪ್ರಹರಣ ಮಾಡುವ ಹಲವಾರು ರಾಕ್ಷಸ ಜಾತಿಯ ಮತ್ತು ಭೂತಜಾತಿಯವರು ವಾಸಿಸುತ್ತಿದ್ದರು. ಅವರು ದೇವತೆಗಳಿಂದ ಜಯಿಸಲ್ಪಟ್ಟರು.
“ಅಲ್ಲಿ ವರುಣ ಸರೋವರದಲ್ಲಿ ಚೆನ್ನಾಗಿ ಉರಿಯುತ್ತಿರುವ ಅಗ್ನಿಯಿದೆ. ಹೊಗೆಯಿಲ್ಲದ ಬೆಂಕಿಯಿಂದ ಆವೃತವಾಗಿರುವ ಇದು ವಿಷ್ಣುವಿನ ಚಕ್ರ. ಈ ಚಾಪವು ಲೋಕಸಂಹಾರಸಂಭೃತ ಗಾಂಡೀವವು. ಈ ಗಾಂಡೀವ ಧನುಸ್ಸನ್ನು ದೇವತೆಗಳು ನಿತ್ಯವೂ ರಕ್ಷಿಸುತ್ತಾರೆ. ಕಾಲವು ಬಂದಾಗ ಇದು ಸಹಸ್ರಶತ ಸಂಖ್ಯೆಗಳಲ್ಲಿ ಪ್ರಾಣಗಳನ್ನು ಹುಟ್ಟಿಸುತ್ತದೆ ಮತ್ತು ಧರಿಸುತ್ತದೆ. ಇದು ರಾಕ್ಷಸರ ಪಕ್ಷವನ್ನು ಸೇರಿದ ಅಶಾಸನೀಯ ರಾಜರನ್ನು ನಿಯಂತ್ರಿಸಲು ಇರುವ, ಬ್ರಹ್ಮವಾದಿನಿ ಬ್ರಹ್ಮನು ಸೃಷ್ಟಿಸಿದ ಪ್ರಥಮ ದಂಡ. ಇದು ಶಕ್ರನಿಂದ ಭಾಷಿತವಾದ, ನರೇಂದ್ರರ ಮಹಾ ಶಸ್ತ್ರ. ಇದು ಮಹೋದಯ ಸಲಿಲರಾಜನ ಪುತ್ರರನ್ನು ಧರಿಸುತ್ತದೆ. ಸಲಿಲರಾಜನ ಛತ್ರಗೃಹದಲ್ಲಿರುವ ಈ ಛತ್ರವು ಮೋಡದಂತೆ ಎಲ್ಲ ಕಡೆಯಿಂದಲೂ ಶೀತಲ ಮಳೆಯನ್ನು ಸುರಿಸುತ್ತದೆ. ಈ ಛತ್ರದಿಂದ ಬೀಳುವ ನೀರು ಚಂದ್ರನಂತೆ ನಿರ್ಮಲವಾಗಿರುತ್ತದೆ. ಆದರೆ ಕತ್ತಲೆಯಿಂದ ತುಂಬಿದ ಇದು ಯಾರಿಗೂ ಕಾಣಿಸುವುದಿಲ್ಲ. ಇಲ್ಲಿ ಇನ್ನೂ ಇತರ ಅದ್ಭುತ ರೂಪಗಳನ್ನು ನೋಡಬಹುದು. ಆದರೆ ಅದು ನಿನ್ನ ಕಾರ್ಯದಲ್ಲಿ ಅಡ್ಡಿಯನ್ನು ತರುತ್ತವೆ. ಆದುದರಿಂದ ಬೇಗನೇ ಮುಂದುವರೆಯೋಣ!
“ಇಲ್ಲಿ, ನಾಗಲೋಕದ ನಾಭಿಸ್ಥಳದಲ್ಲಿ ಪಾತಾಲವೆಂದು ವಿಖ್ಯಾತ ದೈತ್ಯ-ದಾನವ ಸೇವಿತ ಪುರವಿದೆ. ನೀರಿನ ಪ್ರವಾಹದಿಂದ ಎಳೆದು ತರಲ್ಪಟ್ಟ ಭೂಮಿಯ ಜೀವಿಗಳು ಭಯಪೀಡಿತರಾಗಿ ಜೋರಾಗಿ ಚೀರುತ್ತಾ ಇದನ್ನು ಪ್ರವೇಶಿಸುತ್ತವೆ. ನೀರನ್ನೇ ಉಣ್ಣುವ ಅಸುರೋಗ್ನಿಯು ಸತತವೂ ಇಲ್ಲಿ ಉರಿಯುತ್ತಿರುತ್ತದೆ. ಧೃತಾತ್ಮರ ವ್ಯಾಪಾರದಿಂದ ನಿಬದ್ಧವಾಗಿ ಚಲಿಸದೇ ನಿಂತಿದೆ. ಇಲ್ಲಿಯೇ ಸುರರು ಶತ್ರುಗಳನ್ನು ಸಂಹರಿಸಿ ಅಮೃತವನ್ನು ಕುಡಿದು, ಉಳಿದುದನ್ನು ಇಟ್ಟರು. ಇಲ್ಲಿಯೇ ಚಂದ್ರನ ಹಾನಿ-ವೃದ್ಧಿಗಳು ತೋರುತ್ತವೆ. ಅಲ್ಲಿಯೇ ದಿವ್ಯ ಹಯಶಿರನು ಪರ್ವ ಪರ್ವಗಳ ಕಾಲಗಳಲ್ಲಿ ಮೇಲೆದ್ದು ಜಗತ್ತನ್ನು ಸುವರ್ಣ ಪ್ರಕಾಶದಿಂದ ಮತ್ತು ವೇದಘೋಷದಿಂದ ತುಂಬಿಸುತ್ತಾನೆ. ಎಲ್ಲ ಜಲಮೂರ್ತಯಗಳು ಇಲ್ಲಿ ನೀರನ್ನು ಸುರಿಸುವುದರಿಂದ ಈ ಉತ್ತಮ ಪುರವನ್ನು ಪಾತಾಲವೆಂದು ಕರೆಯುತ್ತಾರೆ. ಇಲ್ಲಿಂದಲೇ ಜಗತ್ತಿನ ಹಿತಕ್ಕಾಗಿ ಐರಾವತವು ನೀರನ್ನು ಹಿಡಿದು ಮೇಘಗಳ ಮೇಲೆ ಚೆಲ್ಲುತ್ತದೆ. ಅದನ್ನೇ ಮಹೇಂದ್ರನು ಶೀತಲ ಮಳೆಯಾಗಿ ಸುರಿಸುತ್ತಾನೆ. ಅಲ್ಲಿ ನಾನಾ ವಿಧದ, ಆಕಾರದ, ತಿಮಿ ಮೊದಲಾದ ಜಲಚಾರಿಣಿಗಳು ಸೋಮಪ್ರಭೆಯನ್ನು ಕುಡಿದು ನೀರಿನಲ್ಲಿ ವಾಸಿಸುತ್ತವೆ. ಅಲ್ಲಿ ಪಾತಾಲತಲದಲ್ಲಿ ವಾಸಿಸುವವು ಸೂರ್ಯನ ಕಿರಣಗಳಿಂದ ಸೀಳಿ ಹಗಲಿನಲ್ಲಿ ಸಾಯುತ್ತವೆ ಮತ್ತು ಅವು ರಾತ್ರಿಯಲ್ಲಿ ಪುನಃ ಜೀವಿಸುತ್ತವೆ. ನಿತ್ಯವೂ ರಾತ್ರಿಯಲ್ಲಿ ಉದಯಿಸುವ ಚಂದ್ರನು ತನ್ನ ರಶ್ಮಿಗಳಿಂದ ಅಮೃತವನ್ನು ಮುಟ್ಟಿ ದೇಹಿಗಳನ್ನು ಮುಟ್ಟಿ ಅವುಗಳನ್ನು ಜೀವಂತಗೊಳಿಸುತ್ತಾನೆ. ಅಲ್ಲಿ ಅಧರ್ಮನಿರತ ದೈತ್ಯರು ಕಾಲನಿಂದ ಕಟ್ಟಲ್ಪಟ್ಟು ಪೀಡಿತರಾಗಿ, ವಾಸವನಿಂದ ಶ್ರೀಯನ್ನು ಕಳೆದುಕೊಂಡು ವಾಸಿಸುತ್ತಿದ್ದಾರೆ. ಅಲ್ಲಿ ಸರ್ವಭೂತಮಹೇಶ್ವರ ಭೂತಪತಿಯು ಸರ್ವಭೂತಗಳಿಗಾಗಿ ಉತ್ತಮ ತಪಸ್ಸನ್ನು ತಪಿಸಿದ್ದನು. ಅಲ್ಲಿ ಸ್ವಾಧ್ಯಾಯದಿಂದ ಬಡಕಲಾಗಿ ಪ್ರಾಣಗಳನ್ನು ತೊರೆದು ಸ್ವರ್ಗಗಳನ್ನು ಗೆದ್ದ ಗೋವ್ರತಿ ವಿಪ್ರ ಮಹರ್ಷಿಗಳು ವಾಸಿಸುತ್ತಾರೆ. ಎಲ್ಲಿರುವನೋ ಅಲ್ಲಿಯೇ ನಿತ್ಯವೂ ಮಲಗುವ, ಇತರರು ನೀಡಿದುದನ್ನು ತಿನ್ನುವ, ಇತರರು ನೀಡಿದುದನ್ನು ಉಟ್ಟುಕೊಳ್ಳುವವನನ್ನು ಗೋವ್ರತ ಎಂದು ಹೇಳುತ್ತಾರೆ.
“ಸುಪ್ರತೀಕನ ವಂಶದಲ್ಲಿ ವಾರಣಸತ್ತಮರಾದ ನಾಗರಾಜ ಐರಾವತ, ವಾಮನ, ಕುಮುದ, ಮತ್ತು ಅಂಜನರು ಜನಿಸಿದರು. ಇಲ್ಲಿ ಯಾರಾದರೂ ನಿನಗಿಷ್ಟನಾದ ಗುಣವಂತ ವರನಿದ್ದಾನೆಯೋ ನೋಡು. ಅವನಲ್ಲಿಗೆ ಹೋಗಿ ನಿನ್ನ ಮಗಳನ್ನು ವರಿಸುವಂತೆ ಪ್ರಯತ್ನಿಸೋಣ. ಈ ನೀರಿನಲ್ಲಿ ಶ್ರೀಯಿಂದ ಬೆಳಗುತ್ತಿರುವ ಅಂಡವನ್ನು ನೋಡು! ಸೃಷ್ಟಿಯ ಸಮಯದಿಂದ ಇದು ಇಲ್ಲಿದೆ. ಒಡೆಯುವುದೂ ಇಲ್ಲ, ಚಲಿಸುವುದೂ ಇಲ್ಲ. ಇದರ ಹುಟ್ಟಿನ ಅಥವಾ ಸ್ವಭಾವದ ಕುರಿತು ಮಾತನಾಡಿದ್ದುದನ್ನು ನಾನು ಕೇಳಲಿಲ್ಲ. ಇದರ ತಂದೆ-ತಾಯಿಯರನ್ನು ಕೂಡ ಯಾರೂ ಅರಿಯರು. ಅಂತಕಾಲವು ಬಂದಾಗ ಇದರಿಂದ ಮಹಾನ್ ಅಗ್ನಿಯು ಹೊರಹೊಮ್ಮಿ, ಮೂರು ಲೋಕಗಳಲ್ಲಿರುವ ಸರ್ವ ಸಚರಾಚರಗಳನ್ನೂ ಸುಡುತ್ತದೆ ಎಂದು ಕೇಳಿದ್ದೇವೆ.”
ನಾರದನ ಮಾತುಗಳನ್ನು ಕೇಳಿದ ಮಾತಲಿಯು “ಇಲ್ಲಿ ನನಗೆ ಯಾರೂ ಇಷ್ಟವಾಗಲಿಲ್ಲ. ಬೇರೆ ಎಲ್ಲಿಯಾದರೂ ಬೇಗನೇ ಹೋಗೋಣ!” ಎಂದನು.
ನಾರದನು ಹೇಳಿದನು: “ಇದು ಪುರಗಳಲ್ಲಿಯೇ ಶ್ರೇಷ್ಠವೆನಿಸಿಕೊಂಡಿರುವ, ದೈತ್ಯ-ದಾನವರ, ನೂರಾರು ಮಾಯಾವಿಚಾರಗಳನ್ನುಳ್ಳ ಮಹಾ ಹಿರಣ್ಯಪುರ. ಪಾತಲತಲದಲ್ಲಿರುವ ಇದನ್ನು ಮಯನು ಮನಸ್ಸಿನಲ್ಲಿಯೇ ರಚಿಸಿದನು ಮತ್ತು ವಿಶ್ವಕರ್ಮನು ತುಂಬಾ ಪ್ರಯತ್ನಪಟ್ಟು ನಿರ್ಮಿಸಿದನು. ಹಿಂದೆ ವರಗಳನ್ನು ಪಡೆದ, ಸಹಸ್ರಾರು ಮಾಯೆಗಳನ್ನು ಮಾಡುವ, ಮಹೌಜಸ, ಶೂರ ದಾನವರು ಅಲ್ಲಿ ವಾಸಿಸುತ್ತಾರೆ. ಇದನ್ನು ಶಕ್ರನಿಂದಾಗಲೀ, ಇತರರಿಂದಾಗಲೀ - ವರುಣ, ಯಮ, ಮತ್ತು ಧನದನಿಂದಾಗಲೀ - ವಶಪಡೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲಿ ವಿಷ್ಣುಪದದಿಂದ ಉದ್ಭವಿಸಿದ ಕಾಲಖಂಜ ಅಸುರರೂ, ಬ್ರಹ್ಮವೇದದಿಂದ ಉದ್ಭವಿಸಿದ ನೃರೃತಾ ಯಾತುಧಾನರೂ ವಾಸಿಸುತ್ತಾರೆ. ಅವರು ಕೋರೆದಾಡೆಗಳುಳ್ಳವರು, ಭೀಮರೂಪರು, ಮಾಯಾವಿಗಳು, ವೀರ್ಯಸಂಪನ್ನರು ಮತ್ತು ತಮ್ಮನ್ನು ತಾವೇ ರಕ್ಷಿಸಿಕೊಂಡಿರುವವರು. ಇವರಲ್ಲದೇ ಯುದ್ಧದುರ್ಮದ ನಿವಾತಕವಚರೆಂಬ ದಾನವರೂ ನೆಲೆಸಿದ್ದಾರೆ. ಶಕ್ರನೂ ಕೂಡ ಹೇಗೆ ಇವರನ್ನು ಬಾಧಿಸಲು ಶಕ್ಯನಾಗಿಲ್ಲ ಎನ್ನುವುದು ನಿನಗೆ ತಿಳಿದೇ ಇದೆ. ಬಹಳಷ್ಟು ಬಾರಿ ನೀನು ನಿನ್ನ ಪುತ್ರ ಗೋಮುಖನೊಡನೆ ಮತ್ತು ಶಚೀಪತಿ ದೇವರಾಜನು ಅವನು ಪುತ್ರನೊಡನೆ ಅವರೊಂದಿಗೆ ನಿರ್ಭಗ್ನನಾಗಿ ಹಿಂದಿರುಗಬೇಕಾಗಿತ್ತು. ಚಿನ್ನ-ಬೆಳ್ಳಿಗಳಿಂದ ಮಾಡಲ್ಪಟ್ಟ, ವೈಡೂರ್ಯದ ಹಸಿರಿನಿಂದ, ಬಣ್ಣಬಣ್ಣದ ಪ್ರವಾಲಗಳಿಂದ, ಅರ್ಕಸ್ಫಟಿಕದ ಹೊಳಪಿನಿಂದ, ವಜ್ರಸಾರದಿಂದ ಬೆಳಗುತ್ತಿರುವ, ವಿಧಿಯುಕ್ತವಾಗಿ ಕಟ್ಟಲ್ಪಟ್ಟ ಅವರ ಮನೆಗಳನ್ನು ನೋಡು! ಪುನಃ ನಾಗಗಳಿಂದ ತುಂಬಿದ ಆ ರಾಜಗೃಹಗಳು ತಾರಕ ಶೈಲಗಳಂತೆ ತೋರುತ್ತಿವೆ. ಆ ಮನೆಗಳ ನಿಬಿಡಗಳು ಸೂರ್ಯನಂತೆ ಹೊಳೆಯುತ್ತಿವೆ, ವಿಚಿತ್ರ ಮಣಿಜಾಲಗಳಿಂದ ಉರಿಯುತ್ತಿರುವ ಅಗ್ನಿಯಂತೆ ತೋರುತ್ತಿವೆ. ಇವುಗಳ ರೂಪವನ್ನು ಮತ್ತು ದ್ರವ್ಯಗಳನ್ನು ನಿರ್ದಿಷ್ಟಗೊಳಿಸಲು ಶಕ್ಯವಿಲ್ಲ. ಅವುಗಳನ್ನು ಅತೀವ ಗುಣಗಳಿಂದ ಸಿದ್ಧಪಡಿಸಿದ್ದಾರೆ. ದೈತ್ಯರ ಕ್ರೀಡಾಂಗಣಗಳನ್ನು ನೋಡು, ಹಾಗೆಯೇ ಅವರ ಉತ್ತಮ ಹಾಸಿಗೆಗಳನ್ನು, ರತ್ನಗಳಿಂದ ಮಾಡಿದ ಮಹಾಬೆಲೆಬಾಳುವ ಪಾತ್ರೆಗಳು, ಆಸನಗಳನ್ನೂ ನೋಡು! ಮೋಡಗಳಂತೆ ತೋರುವ ಅವರ ಗುಡ್ಡಬೆಟ್ಟಗಳನ್ನು ನೋಡು, ನೀರಿನ ಆ ಕಾರಂಜಿಗಳನ್ನು, ಬೇಕಾದ ಪುಷ್ಪ ಫಲಗಳನ್ನು ನೀಡುವ, ಬೇಕಾದಲ್ಲಿಗೆ ಚಲಿಸಬಲ್ಲ ಮರಗಳನ್ನು ನೋಡು! ಇಲ್ಲಿ ಯಾರದರೂ ವರನು ಇಷ್ಟವಾದರೆ ಪಡೆಯಬಹುದು. ಅಥವಾ ನಿನಗೆ ಇಷ್ಟವಾದರೆ ಬೇರೆ ಯಾವ ಕಡೆಯಾದರೂ ಹೋಗೋಣ!”
ಹೀಗೆ ಹೇಳಲು ಮಾತಲಿಯು ಉತ್ತರಿಸಿದನು: “ದೇವರ್ಷೇ! ತ್ರಿದಿವೌಕಸರಿಗೆ ವಿಪ್ರಿಯ ಕಾರ್ಯವನ್ನೆಸುಗುವುದು ನನಗೆ ಬೇಡ. ಭ್ರಾತರಾಗಿದ್ದರೂ ದೇವ-ದಾನವರು ನಿತ್ಯವೂ ವೈರವನ್ನು ಸಾಧಿಸುವುದರಲ್ಲಿ ತೊಡಗಿದ್ದಾರೆ. ಹೀಗಿರುವಾಗ ನಾನು ಹೇಗೆ ತಾನೇ ಇವರೊಂದಿಗೆ ಸಂಬಂಧವನ್ನು ಬೆಳೆಸಲು ಇಚ್ಛಿಸಿಯೇನು? ಬೇರೆ ಕಡೆ ಹೋಗುವುದು ಒಳ್ಳೆಯದು. ದಾನವರಲ್ಲಿ ಹುಡುಕಲು ನಾನು ಅರ್ಹನಲ್ಲ. ನಿನ್ನ್ನ ಮನಸ್ಸು ಕಲಹವನ್ನು ಹುಟ್ಟಿಸುವುದರಲ್ಲಿದೆ ಎಂದು ನನಗೆ ತಿಳಿದಿದೆ.”
ನಾರದನು ಹೇಳಿದನು: “ಈ ಲೋಕವು ಪನ್ನಗಗಳನ್ನು ತಿನ್ನುವ ಸುಪರ್ಣ ಪಕ್ಷಿಗಳದ್ದು. ಅವರಿಗೆ ವಿಕ್ರಮವನ್ನು ತೋರಿಸುವಲ್ಲಿ, ಸಂಚಾರದಲ್ಲಿ ಮತ್ತು ಭಾರವನ್ನು ಹೊರುವುದರಲ್ಲಿ ಪರಿಶ್ರಮವಾಗುವುದೆಂದೇ ಇಲ್ಲ. ಈ ಕುಲವು ವೈನತೇಯನ ಆರು ಪುತ್ರರಿಂದ ನಡೆದಿದೆ: ಸುಮುಖ, ಸುನಾಮ, ಸುನೇತ್ರ, ಸುವರ್ಚಸ, ಸುರೂಪ ಮತ್ತು ಪಕ್ಷಿರಾಜ ಸುಬಲ. ವಿನತೆಯ ಕುಲಕತೃಗಳಾಗಿ ಹುಟ್ಟಿ ಈ ಪಕ್ಷಿರಾಜರು ತಮ್ಮ ಜಾತಿಯನ್ನು ಸಹಸ್ರಾರು ನೂರಾರು ಸಂಖ್ಯೆಗಳಾಗಿ ವರ್ಧಿಸಿದರು. ಹಾಗೆ ವಿವಿಧ ಜಾತಿಗಳ ಕಶ್ಯಪನ ವಂಶವನ್ನು ವೃದ್ಧಿಸಿದರು. ಇವರೆಲ್ಲರೂ ಶ್ರೀಯಿಂದ ಕೂಡಿದವರು, ಎಲ್ಲರೂ ಶ್ರೀವತ್ಸಲಕ್ಷಣರು, ಎಲ್ಲರೂ ಶ್ರೀಯನ್ನು ಬಯಸುವವರು ಮತ್ತು ಅತಿ ಉನ್ನತ ಭಾರವನ್ನು ಹೊರಬಲ್ಲವರು. ಕರ್ಮದಲ್ಲಿ ಅವರು ಕ್ಷತ್ರಿಯರೆನಿಸಿಕೊಂಡರೂ ಕರುಣೆಯಿಲ್ಲದೇ ನಾಗಗಳನ್ನು ಭೋಜಿಸುತ್ತಾರೆ. ತಮ್ಮ ದಾಯಾದಿಗಳ ನಾಶಕ್ಕೆ ಕತೃಗಳಾಗಿರುವುದರಿಂದ ಅವರಿಗೆ ಬ್ರಾಹ್ಮಣ್ಯವು ದೊರೆಯುವುದಿಲ್ಲ. ಇವರಲ್ಲಿ ಪ್ರಧಾನರಾದವರ ಹೆಸರುಗಳನ್ನು ಹೇಳುತ್ತೇನೆ. ಕೇಳು. ವಿಷ್ಣುವಿನ ಪರಿಗ್ರಹವನ್ನು ಪಡೆದಿದೆಯೆಂದು ಈ ಕುಲವು ಶ್ಲಾಘನೀಯವಾಗಿದೆ. ವಿಷ್ಣುವೇ ಇವರ ದೇವತೆ. ವಿಷ್ಣುವೇ ಇವರ ಪರಾಯಣ. ಅವರ ಹೃದಯದಲ್ಲಿ ಸದಾ ವಿಷ್ಣುವಿರುತ್ತಾನೆ. ವಿಷ್ಣುವೇ ಇವರ ಸದಾ ಗತಿ. ಸುವರ್ಣಚೂಡ, ನಾಗಾಶೀ, ದಾರುಣ, ಚಂಡತುಂಡಕ, ಅನಲ, ಅನಿಲ, ವಿಶಾಲಾಕ್ಷ, ಕುಂಡಲೀ, ಕಾಶ್ಯಪಿ. ದ್ವಜವಿಷ್ಕಂಭ, ವೈನತೇಯ, ವಾಮನ, ವಾತವೇಗ, ದಿಶಾಚಕ್ಷು, ನಿಮೇಷ, ನಿಮಿಷ, ತ್ರಿವಾರ, ಸಪ್ತವಾರ, ವಾಲ್ಮೀಕಿ, ದ್ವೀಪಕ, ದೈತ್ಯದ್ವೀಪ, ಸರಿದ್ವೀಪ, ಸರಸ, ಪದ್ಮಕೇಸರ, ಸುಮುಖ, ಸುಖಕೇತು, ಚಿತ್ರಬರ್ಹ, ಅನಘ, ಮೇಘಕೃತ್, ಕುಮುದ, ದಕ್ಷ, ಸರ್ಪಾಂತ, ಸೋಮಭೋಜನ, ಗುರುಭಾರ, ಕಪೋತ, ಸೂರ್ಯನೇತ್ರ, ಚಿರಾಂತಕ, ವಿಷ್ಣುಧನ್ವಾ, ಕುಮಾರ, ಪರಿಬರ್ಹ, ಹರಿ, ಸುಸ್ವರ, ಮಧುಪರ್ಕ, ಹೇಮವರ್ಣ, ಮಲಯ, ಮಾತರಿ, ನಿಶಾಕರ, ದಿವಾಕರ. ನಾನು ಹೇಳಿದ ಗರುಡನ ಈ ಮಕ್ಕಳು ಇದೇ ಪ್ರದೇಶದಲ್ಲಿ ವಾಸಿಸುತ್ತಾರೆ. ಯಸಸ್ಸು, ಕೀರ್ತಿ ಮತ್ತು ಶಕ್ತಿಯಲ್ಲಿ ಪ್ರಧಾನರಾಗಿರುವವರ ಹೆಸರುಗಳನ್ನು ಮಾತ್ರ ಹೇಳಿದ್ದೇನೆ. ಇಲ್ಲಿ ನಿನಗೆ ಯಾರೂ ಇಷ್ಟವಾಗದೇ ಇದ್ದರೆ ಬಾ ಹೋಗೋಣ. ನಿನ್ನನ್ನು ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ನಿನ್ನ ಮಗಳಿಗೆ ಇಷ್ಟವಾಗುವ ವರನು ಸಿಗಬಹುದು.
“ಇದು ಪೃಥಿವಿಯ ಕೆಳಗಿರುವ ರಸಾತಲವೆಂಬ ಹೆಸರಿನ ಏಳನೆಯ ಲೋಕ. ಇಲ್ಲಿ ಅಮೃತಸಂಭವೆ ಗೋವುಗಳ ಮಾತೆ ಸುರಭಿಯು ವಾಸಿಸುತ್ತಾಳೆ. ಇವಳು ಸತತವೂ ಭೂಮಿಯಲ್ಲಿ ಸಾರಸಂಭವೆನಿಸಿದ, ಆರು ರಸಗಳಲ್ಲಿ ಒಂದೇ ಅನುತ್ತಮ ರಸಸಾರವಾದ ಹಾಲನ್ನು ಸುರಿಸುತ್ತಾಳೆ. ಈ ಅನಿಂದಿತೆಯು ಹಿಂದೆ ಅಮೃತದಿಂದ ಸಂತೃಪ್ತನಾಗಿ ಸಾರವನ್ನು ಕಕ್ಕಿದ ಪಿತಾಮಹನ ಬಾಯಿಯಿಂದ ಹೊರಬಿದ್ದಳು. ಅವಳ ಹಾಲಿನ ಧಾರೆಯು ಭೂಮಿಯ ಮೇಲೆ ಬೀಳಲು ಪವಿತ್ರವೂ, ಪರಮ ಉತ್ತಮವೂ ಆದ ಕ್ಷೀರನಿಧಿ ಸರೋವರವು ಮಾಡಲ್ಪಟ್ಟಿತು. ಅದರ ದಡವು ಸುತ್ತಲೂ ಹಾಲಿನ ನೊರೆಯಿಂದ ಕೂಡಿದೆ. ಅಲ್ಲಿ ವಾಸಿಸುವ ಮುನಿಸತ್ತಮರು ಆ ಹಾಲಿನ ನೊರೆಯನ್ನು ಕುಡಿಯುತ್ತಾರೆ. ಅವರನ್ನು ಫೇನಪಾ ಎಂಬ ಹೆಸರಿನಿಂದ ಕರೆಯುತ್ತಾರೆ. ಏಕೆಂದರೆ ಅವರು ಈ ಹಾಲಿನ ನೊರೆಯನ್ನು ಕುಡಿದು ಮಾತ್ರ ಜೀವಿಸುತ್ತಾರೆ. ಉಗ್ರ ತಪಸ್ಸಿನಲ್ಲಿ ತೊಡಗಿರುವ ಇವರಿಗೆ ದೇವತೆಗಳೂ ಭಯಪಡುತ್ತಾರೆ. ಅವಳಿಗೆ ಎಲ್ಲ ದಿಕ್ಕುಗಳಲ್ಲಿಯೂ ವಾಸಿಸುವ, ದಿಶಾಪಾಲರು ಇದ್ದಾರೆ. ಅವರು ದಿಕ್ಕುಗಳನ್ನು ಧರಿಸುತ್ತಾರೆ ಎಂದು ಕೇಳಿದ್ದೇವೆ. ಸುರೂಪ ಎಂಬ ಹೆಸರಿನ ಸೌರಭಿಯು ಪೂರ್ವದಿಕ್ಕನ್ನು ಬೆಂಬಲಿಸುತ್ತಾಳೆ, ಹಂಸಕ ಎಂಬ ಹೆಸರಿನವಳು ಇನ್ನೊಂದು ದಿಕ್ಕು ದಕ್ಷಿಣವನ್ನು ಬೆಂಬಲಿಸುತ್ತಾಳೆ. ಮಹಾನುಭಾವೆ ವಿಶ್ವರೂಪಿ ಸುಭದ್ರೆಯು ವರುಣನ ಪಶ್ಚಿಮ ದಿಕ್ಕನ್ನು ಬೆಂಬಲಿಸುತ್ತಾಳೆ. ಸರ್ವಕಾಮದುಘಾ ಎಂಬ ಹೆಸರಿನ ಧೇನುವು ಧರ್ಮಯುಕ್ತವಾದ. ಸಂಪತ್ತಿನ ಒಡೆಯ ಕುಬೇರನದೆಂದು ಸೂಚಿತಗೊಂಡ ಉತ್ತರ ದಿಕ್ಕನ್ನು ಬೆಂಬಲಿಸುತ್ತಾಳೆ. ಇವರ ಹಾಲಿನಿಂದ ಮಿಶ್ರಿತವಾದ ಕ್ಷೀರಸಾಗರವನ್ನು ಅಸುರರೊಂದಿಗೆ ಕೂಡಿ ದೇವತೆಗಳು ಮಂದರವನ್ನು ಕಡಗೋಲನ್ನಾಗಿ ಮಾಡಿ ಕಡೆದರು. ಅದರಿಂದ ವಾರುಣೀ ಲಕ್ಷ್ಮೀ, ಅಮೃತ, ಉಚ್ಛೈಃಶ್ರವಸ್, ಅಶ್ವರಾಜ, ಮತ್ತು ಮಣಿರತ್ನ ಕೌಸ್ತುಭವು ಹುಟ್ಟಿದವು. ಸುರಭಿಯು ಸುರಿಸುವ ಹಾಲು ಸುಧೆಯನ್ನು ಕುಡಿಯುವವರಿಗೆ ಸುಧೆಯಾಗುತ್ತದೆ, ಸ್ವಧಾವನ್ನು ಕುಡಿಯುವವರಿಗೆ ಸ್ವಧಾ ಆಗುತ್ತದೆ, ಅಮೃತವನ್ನು ಕುಡಿಯುವವರಿಗೆ ಅಮೃತವಾಗುತ್ತದೆ. ರಸಾತಲವಾಸಿಗಳ ಕುರಿತಾದ ಒಂದು ಪುರಾತನ ಗೀತೆಯೊಂದಿದೆ. ಅದನ್ನು ಮನುಷ್ಯರ ಲೋಕದಲ್ಲಿಯೇ ಕೇಳಿಬರುತ್ತದೆ. ರಸಾತಲದಲ್ಲಿ ವಾಸಿಸುವವರಿಗೆ ಇರುವಷ್ಟು ಸುಖವು ನಾಗಲೋಕದಲ್ಲಿಲ್ಲ, ಸ್ವರ್ಗದಲ್ಲಿಲ್ಲ, ವಿಮಾನದಲ್ಲಿಲ್ಲ ಮತ್ತು ತ್ರಿವಿಷ್ಟಪದಲ್ಲಿಲ್ಲ.
“ಇದು ವಾಸುಕಿಯಿಂದ ಪಾಲಿಸಲ್ಪಟ್ಟ ಭೋಗವತೀ ಎಂಬ ಹೆಸರಿನ ಪುರಿ. ಇದು ದೇವರಾಜನ ಅಮರಾವತಿಯಂತಿದೆ. ಮಹಾ ತಪಸ್ಸಿನ ಪ್ರಭಾವದಿಂದ ಸದಾ ಮಹಿಯನ್ನು ಎತ್ತಿಹಿಡಿದಿರುವ ಲೋಕಮುಖ್ಯ ಶೇಷನಾಗನು ಇಲ್ಲಿದ್ದಾನೆ. ಶ್ವೇತಪರ್ವತದ ಆಕಾರದಲ್ಲಿರುವ, ನಾನಾವಿಧ ವಿಭೂಷಣನಾದ ಆ ಮಹಾಬಲನು ಸಹಸ್ರ ಮುಖಗಳನ್ನೂ ಜ್ವಲಿಸುವ ನಾಲಿಗೆಗಳನ್ನೂ ಧರಿಸಿದ್ದಾನೆ. ಇಲ್ಲಿ ನಾನಾವಿಧದ, ಆಕಾರಗಳ, ನಾನಾವಿಧ ವಿಭೂಷಿತರಾದ ನಾಗಿಣಿ ಸುರಸೆಯ ಮಕ್ಕಳು ನಿಶ್ಚಿಂತರಾಗಿ ವಾಸಿಸುತ್ತಿದ್ದಾರೆ. ಅವರೆಲ್ಲರೂ ಮಣಿ-ಸ್ವಸ್ತಿಕ-ಚಕ್ರದ ಚಿಹ್ನೆಗಳನ್ನುಳ್ಳವರು, ಕಮಂಡಲುಕ ಲಕ್ಷಣರು, ಸಹಸ್ರಸಂಖ್ಯೆಗಳಲ್ಲಿದ್ದಾರೆ, ಬಲಶಾಲಿಗಳು ಮತ್ತು ಸ್ವಭಾವತಃ ರೌದ್ರರು. ಕೆಲವರಿಗೆ ಸಾವಿರತಲೆಗಳಿವೆ, ಕೆಲವರಿಗೆ ಐದು ಮುಖಗಳಿವೆ, ಕೆಲವರಿಗೆ ನೂರು ಶೀರ್ಷಗಳಿವೆ, ಇನ್ನು ಕೆಲವರಿಗೆ ಮೂರು ಶಿರಗಳಿವೆ. ಕೆಲವರಿಗೆ ಹತ್ತು ತಲೆಗಳಿದ್ದರೆ ಕೆಲವರಿಗೆ ಏಳು ಮುಖಗಳಿವೆ. ಆ ಮಹಾಭೋಗರು ಭೂಮಿಯಲ್ಲಿ ಪಸರಿಸುವ ಪರ್ವತಂತೆ ಮಹಾಕಾಯದವರು. ಅವರು ಸಹಸ್ರ, ಪ್ರಯುತ, ಅರ್ಬುದ ಸಂಖ್ಯೆಯಲ್ಲಿದ್ದಾರೆ. ಒಂದೇ ವಂಶದ ನಾಗಗಳು ಅನೇಕ. ಅವರಲ್ಲಿ ಶ್ರೇಷ್ಠರಾದವರನ್ನು ನನ್ನಿಂದ ಕೇಳು. ವಾಸುಕಿ, ತಕ್ಷಕ, ಕರ್ಕೋಟಕ, ಧನಂಜಯ, ಕಾಲೀಯ, ನಹುಷ, ಕಂಬಲ, ಅಶ್ವತರ, ಬಾಹ್ಯಕುಂಡ, ಮಣಿರ್ನಾಗ, ಅಪೂರಣ, ಖಗ, ವಾಮನ, ಶೈಲಪತ್ರ, ಕುಕುರ, ಕುಕುಣ, ಆರ್ಯಕ, ನಂದಕ, ಕಲಶ, ಪೋತಕ, ಕೈಲಾಸಕ, ಪಿಂಜರಕ, ನಾಗ, ಐರಾವತ, ಸುಮನೋಮುಖ, ದಧಿಮುಖ, ಶಂಖ, ನಂದ, ಉಪನಂದಕ, ಆಪ್ತ, ಕೋಟಕನ, ಶಿಖೀ, ನಿಷ್ಠೂರಿಕ, ತಿತ್ತಿರಿ, ಹಸ್ತಿಭದ್ರ, ಕುಮುದ, ಮಾಲ್ಯಪಿಂಡಕ, ಇಬ್ಬರು ಪದ್ಮರು, ಪುಂಡರೀಕ, ಪುಷ್ಪ, ಮುದ್ಗರಪರ್ಣಕ, ಕರವೀರ, ಪೀಠರಕ, ಸಂವೃತ್ತ, ವೃತ್ತ, ಪಿಂಡಾರ, ಬಿಲ್ವಪತ್ರ, ಮೂಷಿಕಾದ, ಶಿರೀಷಕ, ದಿಲೀಪ, ಶಂಖಶೀರ್ಷ, ಜ್ಯೋತಿಷ್ಕ, ಅಪರಾಜಿತ, ಕೌರವ್ಯ, ಧೃತರಾಷ್ಟ್ರ, ಕುಮಾರ, ಕುಶಕ, ವಿರಜ, ಧಾರಣ, ಸುಬಾಹು, ಮುಖರ, ಜಯ, ಬಧಿರ, ಅಂಧ, ವಿಕುಂಡ, ವಿರಸ ಮತ್ತು ಸುರಸ. ಇವರು ಮತ್ತು ಇನ್ನೂ ಇತರ ಬಹಳಷ್ಟು ಕಶ್ಯಪನ ಮಕ್ಕಳ ಕುರಿತು ಕೇಳಿದ್ದೇವೆ. ಇಲ್ಲಿ ಯಾರಾದರೂ ವರನಾಗಿ ಇಷ್ಟವಾಗುತ್ತಾನೋ ನೋಡು!”
ಆಗ ಮಾತಲಿಯು ಅಲ್ಲಿದ್ದ ಓರ್ವನನ್ನು ಸತತವಾಗಿ ಏಕಾಗ್ರಚಿತ್ತನಾಗಿ ನೋಡುತ್ತಿದ್ದನು. ಅವನು ನಾರದನನ್ನು ಸಂತೋಷದಿಂದ ಕೇಳಿದನು: “ಕೌರವ್ಯ ಆರ್ಯಕನ ಎದುರು ನಿಂತಿರುವ ಈ ದ್ಯುತಿಮಾನ, ದರ್ಶನೀಯನು ಯಾರು? ಇವನು ಯಾವ ಕುಲನಂದನನು? ಇವನ ತಂದೆ ತಾಯಿಯರು ಯಾರು? ಇವನು ಯಾವ ನಾಗ ವಂಶದವನು? ಇವನು ಯಾವ ಮಹಾಕುಲದ ಬಾವುಟದಂತೆ ನಿಂತಿರುವನು? ಅವನ ಬುದ್ಧಿ, ಧೈರ್ಯ, ರೂಪ, ವಯಸ್ಸಿನಿಂದ ನನ್ನ ಮನಸ್ಸು ಹರ್ಷಿತವಾಗಿದೆ. ದೇವರ್ಷೇ! ಇವನೇ ಗುಣಕೇಶಿಗೆ ಪತಿ ಮತ್ತು ವರ.”
ಸುಮುಖನನ್ನು ನೋಡಿ ಮಾತಲಿಯು ಸಂತೋಷಗೊಂಡಿದುದನ್ನು ಕಂಡು ನಾರದನು ಅವನ ಮಹಾತ್ಮೆ, ಜನ್ಮ-ಕರ್ಮಗಳನ್ನು ನಿವೇದಿಸಿದನು: “ಐರಾವತ ಕುಲದಲ್ಲಿ ಜನಿಸಿದ ಈ ನಾಗರಾಜನ ಹೆಸರು ಸುಮುಖ. ಆರ್ಯಕನ ಮೊಮ್ಮಗ ಮತ್ತು ವಾಮನನ ಮಗಳ ಮಗ. ಮಾತಲೇ! ಇವನ ತಂದೆ ಚಿಕುರ ಎಂಬ ಹೆಸರಿನ ನಾಗ. ಸ್ವಲ್ಪವೇ ಸಮಯದ ಹಿಂದೆ ಅವನು ವೈನತೇಯನಿಂದ ಪಂಚತ್ವವನ್ನು ಪಡೆದನು.”
ನಾರದನ ಮಾತನ್ನು ಕೇಳಿ ಮಾತಲಿಯು ಪ್ರೀತಮನಸ್ಕನಾಗಿ ”ಈ ಭುಜಗೋತ್ತಮನು ನನ್ನ ಅಳಿಯನಾಗಬೇಕೆಂದು ಬಯಸುತ್ತೇನೆ. ಮುನೇ! ಅವನನ್ನೇ ಪಡೆಯಲು ಪ್ರಯತ್ನಿಸೋಣ. ಈ ನಾಗಪತಿಗೆ ನನ್ನ ಪ್ರಿಯ ಮಗಳನ್ನು ಕೊಡಲು ಬಯಸುತ್ತೇನೆ.”
ಆಗ ನಾರದನು ಆರ್ಯಕನನ್ನುದ್ದೇಶಿಸಿ ಹೇಳಿದನು: “ಇವನು ಮಾತಲಿಯೆಂಬ ಹೆಸರಿನ ಶಕ್ರನ ಸೂತ ಮತ್ತು ಅವನ ಪ್ರೀತಿಯ ಸ್ನೇಹಿತ. ಇವನು ಶುಚಿ, ಶೀಲಗುಣೋಪೇತ, ತೇಜಸ್ವೀ, ವೀರ್ಯವಂತ ಮತ್ತು ಬಲಶಾಲಿಯೂ ಕೂಡ. ಇವನು ಶಕ್ರನ ಸಖ, ಮಂತ್ರಿ ಮತ್ತು ಸಾರಥಿಯೂ ಕೂಡ. ರಣ ರಣಗಳಲ್ಲಿಯೂ ಪ್ರಭಾವದಲ್ಲಿ ಇವನ ಮತ್ತು ವಾಸವನ ನಡುವೆ ಸ್ವಲ್ಪವೇ ವ್ಯತ್ಯಾಸವಿರುವುದು ಕಾಣಿಸುತ್ತದೆ. ದೇವಾಸುರರ ಯುದ್ಧಗಳಲ್ಲಿ ಇವನೇ ಸಹಸ್ರ ಕುದುರೆಗಳನ್ನು ಕಟ್ಟಿದ ಉತ್ತಮ ಚೈತ್ರ ರಥವನ್ನು ಮನಸ್ಸಿನಲ್ಲಿಯೇ ನಡೆಸಿದ್ದಾನೆ. ಇವನು ಅಶ್ವಗಳ ಮೇಲೆ ವಿಜಯವನ್ನು ಸಾಧಿಸಿದುದರಿಂದ ವಾಸವನು ಅರಿಗಳನ್ನು ಜಯಿಸಿದನು. ಮೊದಲೇ ಇವನು ಹೊಡೆದವರ ಮೇಲೆ ಬಲಭಿತನು ಹೊಡೆದನು. ಇವನ ಕನ್ಯೆ, ವರಾರೋಹೆಯು ರೂಪದಲ್ಲಿ ಭುವಿಯಲ್ಲಿಯೇ ಅಸದೃಶಳಾಗಿದ್ದಾಳೆ. ಸತ್ವಶೀಲಗುಣೋಪೇತಳಾದ ಅವಳು ಗುಣಕೇಶೀ ಎಂದು ವಿಶ್ರುತಳಾಗಿದ್ದಾಳೆ. ಈ ಅಮರದ್ಯುತಿಯು ಅವಳಿಗೆ ವರನನ್ನು ಹುಡುಕಿಕೊಂಡು ಮೂರು ಲೋಕಗಳಲ್ಲಿಯೂ ಸಂಚರಿಸುತ್ತಿದ್ದಾನೆ. ನಿನ್ನ ಮೊಮ್ಮಗ ಸುಮುಖನು ಇವನಿಗೆ ತನ್ನ ಮಗಳಿಗೆ ಪತಿಯಾಗಬೇಕೆಂದು ಬಯಸಿದ್ದಾನೆ. ಆರ್ಯಕ! ಒಂದುವೇಳೆ ನಿನಗೂ ಇದು ಇಷ್ಟವಾದರೆ, ಬೇಗನೇ ಕನ್ಯೆಯನ್ನು ಸ್ವೀಕರಿಸುವ ಮನಸ್ಸು ಮಾಡಬೇಕು. ವಿಷ್ಣುವಿನ ಕುಲದಲ್ಲಿ ಲಕ್ಷ್ಮಿಯು ಹೇಗೋ, ವಿಭಾವಸುವಿನಲ್ಲಿ ಸ್ವಾಹಾಳು ಹೇಗೋ ಹಾಗೆ ಸುಮಧ್ಯಮೆ ಗುಣಕೇಶಿಯು ನಿನ್ನ ಕುಲದಲ್ಲಿ ಇರುವಂತಾಗಲಿ. ಆದುದರಿಂದ ನೀನು ಮೊಮ್ಮಗನಿಗಾಗಿ ವಾಸವನಿಗೆ ಶಚಿಯಂತೆ ಸದೃಶಳೂ, ಪ್ರತಿರೂಪಳೂ ಆಗಿರುವ ಗುಣಕೇಶಿಯನ್ನು ಸ್ವೀಕರಿಸಬೇಕು. ನಿನ್ನ ಮತ್ತು ಐರಾವತನ ಬಹಳ ಮಾನವನ್ನು ಅರಿತು, ತಂದೆಯನ್ನು ಕಳೆದುಕೊಂಡಿದ್ದರೂ, ಸುಮುಖನ ಗುಣ, ಶೀಲ, ಶೌಚಗಳನ್ನು ತಿಳಿದು ಗುಣವಂತನಾದ ಇವನನ್ನು ವರನನಾಗಿ ಆರಿಸಿಕೊಂಡಿದ್ದೇವೆ. ಇವನು ಸ್ವಯಂ ಬಂದು ಕನ್ಯೆಯನ್ನು ಕೊಡಲು ಸಿದ್ಧನಿದ್ದಾನೆ. ನೀನೂ ಕೂಡ ಈ ಮಾತಲಿಯ ಸಮ್ಮಾನವನ್ನು ಮಾಡಬೇಕು.”
ನಾರದನು ಹೀಗೆ ಹೇಳಲು ಆರ್ಯಕನು ಮಗನ ಮರಣವನ್ನು ನೆನೆದು ದುಃಖಿತನೂ ಮತ್ತು ಮೊಮ್ಮಗನನ್ನು ಕೇಳುತ್ತಿದ್ದಾರೆಂದು ಹರ್ಷಿತನೂ ಆಗಿ ಹೇಳಿದನು: “ದೇವರ್ಷೇ! ನಿನ್ನ ಮಾತಿಗೆ ಬಹುಮತವಿಲ್ಲದೇ ಇಲ್ಲ. ಯಾರು ತಾನೇ ಶಕ್ರನ ಈ ಸಖನೊಂದಿಗೆ ಸಂಬಂಧವನ್ನು ಬೆಳೆಸಲು ಬಯಸುವುದಿಲ್ಲ? ಆದರೆ ನಮ್ಮ ದೌರ್ಬಲ್ಯದ ಕಾರಣದ ಕುರಿತು ಚಿಂತಿಸುತ್ತಿದ್ದೇನೆ. ಇವನ ತಂದೆ, ನನ್ನ ಮಗ ಮಹಾದ್ಯುತಿಯನ್ನು ವೈನತೇಯನು ಭಕ್ಷಿಸಿದನು. ಅದರಿಂದಲೇ ನಾವು ದುಃಖಾರ್ತರಾಗಿದ್ದೇವೆ. ಹೋಗುವಾಗ ವೈನತೇಯನು ಪುನಃ ಹೇಳಿದ್ದಾನೆ - ಇನ್ನೊಂದು ತಿಂಗಳಲ್ಲಿ ಸುಮುಖನನ್ನು ಭಕ್ಷಿಸುತ್ತೇನೆ - ಎಂದು. ಅದರಂತೆಯೇ ನಿಶ್ಚಯವಾಗಿಯೂ ಆಗುತ್ತದೆ ಎಂದು ನಮಗೆ ತಿಳಿದಿದೆ. ಸುಪರ್ಣನ ಈ ಮಾತಿನಿಂದ ನಮ್ಮ ಸಂತೋಷವೆಲ್ಲವೂ ನಷ್ಟವಾಗಿದೆ.”
ಆಗ ಮಾತಲಿಯು ಇದನ್ನು ಹೇಳಿದನು: “ನಾನೊಂದು ಯೋಚನೆಯನ್ನು ಮಾಡಿದ್ದೇನೆ. ನಿನ್ನ ಮೊಮ್ಮಗ ಸುಮುಖನನ್ನು ನನ್ನ ಅಳಿಯನೆಂದು ಆರಿಸಿಕೊಂಡಿದ್ದೇನೆ. ಈ ಪನ್ನಗನು ನನ್ನ ಮತ್ತು ನಾರದನೊಡನೆ ಬರಲಿ. ಹೋಗಿ ತ್ರಿಲೋಕೇಶ ಸುರಪತಿ ವಾಸವನನ್ನು ಕಾಣೋಣ. ಸತ್ತಮ! ಸುಪರ್ಣನ ಕಾರ್ಯದಲ್ಲಿ ವಿಘ್ನವನ್ನು ತರಲು ಪ್ರಯತ್ನಿಸುತ್ತೇನೆ. ಇವನಿಗೆ ಸಾಕಷ್ಟು ಆಯುಷ್ಯವು ಉಳಿಯುವಂತೆಯೂ ಮಾಡೋಣ. ಕಾರ್ಯ ಸಿದ್ಧಿಗಾಗಿ ನನ್ನೊಡನೆ ಸುಮುಖನೂ ಕೂಡ ದೇವೇಶನಲ್ಲಿಗೆ ಬರಬೇಕು. ನಿನಗೆ ಮಂಗಳವಾಗಲಿ!”
ಆಗ ಆ ಮಹೌಜಸ ಸುಮುಖನನ್ನು ಕರೆದುಕೊಂಡು ಎಲ್ಲರೂ ಆಸೀನನಾಗಿದ್ದ ದೇವರಾಜ, ಮಹಾದ್ಯುತಿ ಶಕ್ರನನ್ನು ಕಂಡರು. ಅಲ್ಲಿ ಅವನೊಡನೆ ಚತುರ್ಭುಜ ಭಗವಾನ್ ವಿಷ್ಣುವೂ ಇದ್ದನು. ಅವರಿಗೆ ಮಾತಲಿ ನಾರದರಿಬ್ಬರೂ ಎಲ್ಲವನ್ನೂ ಹೇಳಿದರು. ಆಗ ವಿಷ್ಣುವು ಭುವನೇಶ್ವರ ಪುರಂದರನಿಗೆ ಹೇಳಿದನು: “ಇವನಿಗೆ ಅಮೃತವನ್ನಿತ್ತು ಅಮರರ ಸಮನನ್ನಾಗಿ ಮಾಡು. ವಾಸವ! ಇದರಿಂದ ಮಾತಲಿ, ನಾರದ, ಸುಮುಖರಿಗೆ ಬೇಕಾದುದನ್ನು ನಿನ್ನ ಕೃಪೆಯಿಂದ ಪಡೆಯುವಂತಾಗುತ್ತದೆ.”
ವೈನತೇಯನ ಪರಾಕ್ರಮದ ಕುರಿತು ಯೋಚಿಸಿ ಪುರಂದರನು ವಿಷ್ಣುವಿಗೆ “ಅದನ್ನು ನೀನೇ ಕೊಡು!” ಎಂದನು.
ವಿಷ್ಣುವು ಹೇಳಿದನು: “ವಿಭೋ! ಚರಾಚರರ ಲೋಕಗಳ ಈಶನು ನೀನು! ನೀನು ಕೊಡುವುದನ್ನು ಕೊಡಬಾರದಂತೆ ಮಾಡಲು ಯಾರು ತಾನೇ ಮುಂದೆಬಂದಾರು?”
ಬಲವೃತ್ರಹನು ಆ ಪನ್ನಗನಿಗೆ ಉತ್ತಮ ಆಯುಸ್ಸನ್ನು ಅನುಗ್ರಹಿಸಿದನು. ಅವನಿಗೆ ಅಮೃತಪ್ರಾಶನವನ್ನು ಮಾಡಲಿಲ್ಲ. ಸುಮುಖನಾದರೋ ಆ ವರವನ್ನು ಪಡೆದು ಸುಮುಖನಾದನು. ಮದುವೆಮಾಡಿಕೊಂಡು, ಸಂತೋಷದಿಂದ ಮನೆಗೆ ತೆರಳಿದನು. ನಾರದ ಆರ್ಯಕರೂ ಕೂಡ ಕಾರ್ಯಗಳನ್ನು ಪೂರೈಸಿ ಸಂತೋಷಗೊಂಡು ಮಹಾದ್ಯುತಿ ದೇವರಾಜನನ್ನು ಅರ್ಚಿಸಿ ಹಿಂದಿರುಗಿದರು.
ನಡೆದುದನ್ನು – ಶಕ್ರನು ನಾಗನಿಗೆ ಆಯುಸ್ಸನ್ನು ಕೊಟ್ಟಿದ್ದುದನ್ನು - ಮಹಾಬಲ ಗರುಡನು ಕೇಳಿದನು. ಪರಮಕೃದ್ಧನಾಗಿ ಖಗ ಸುಪರ್ಣನು ತನ್ನ ರೆಕ್ಕೆಗಳಿಂದ ಮಹಾ ಧೂಳನ್ನೆಬ್ಬಿಸಿ ತ್ರಿಭುವನದ ವಾಸವನ ಬಳಿ ಧಾವಿಸಿ ಹೇಳಿದನು: “ಭಗವನ್! ನನ್ನನ್ನು ಅಲ್ಲಗಳೆದು ನೀನು ಏಕೆ ನನ್ನ ಹಸಿವೆಗೆ ಭಂಗ ತರುತ್ತಿದ್ದೀಯೆ. ನೀನೇ ಬಯಸಿ ಕೊಟ್ಟ ವರವನ್ನು ಪುನಃ ಹಿಂದೆ ತೆಗೆದುಕೊಳ್ಳುತ್ತಿದ್ದೀಯೆ! ನಿಸರ್ಗದ ಸರ್ವಭೂತಗಳ ಸರ್ವಭೂತೇಶ್ವರ ಧಾತ್ರನು ನನ್ನ ಆಹಾರವನ್ನು ನಿಶ್ಚಯಿಸಿದ್ದಾನೆ. ನೀನು ಏಕೆ ಅದನ್ನು ತಡೆಯುತ್ತಿದ್ದೀಯೆ? ನಾನು ಈ ಮಹಾನಾಗನನ್ನು ಮತ್ತು ಸಮಯವನ್ನು ನಿರ್ದಿಷ್ಟಗೊಳಿಸಿದ್ದೆ. ಇದರಿಂದ ನಾನು ನನ್ನ ಮಹಾ ಸಂಖ್ಯೆಯ ಸಂತತಿಗೆ ಉಣಿಸುವವನಿದ್ದೆ. ಇದರಿಂದ ನಾನು ಬೇರೆ ಯಾರನ್ನೂ ಅನ್ಯಥಾ ಹಿಂಸಿಸಲು ಬಯಸುವುದಿಲ್ಲ. ನಿನಗಿಷ್ಟಬಂದಂತೆ ಬೇಕಂತೆಲೇ ನಾನು ಮತ್ತು ಹಾಗೆಯೇ ನನ್ನ ಪರಿವಾರದವರು, ನನ್ನ ಮನೆಯಲ್ಲಿ ನೇಮಿಸಿರುವ ಸೇವಕರು ಪ್ರಾಣವನ್ನು ತೊರೆಯಬೇಕು ಎಂದು ನೀನು ಈ ಆಟವನ್ನು ಆಡುತ್ತಿದ್ದೀಯೆ! ಅದರಿಂದ ನೀನು ಸಂತೋಷಗೊಳ್ಳುತ್ತೀಯೆ! ಇದಕ್ಕೆ ಮತ್ತು ಇದಕ್ಕಿಂತಲೂ ಹೆಚ್ಚಿನದಕ್ಕೆ ನಾನು ಅರ್ಹ. ತ್ರೈಲೋಕ್ಯೇಶ್ವರನಾದರೂ ನಾನು ಇತರರ ಸೇವಕಮಾತ್ರ ಆಗಿಬಿಟ್ಟಿದ್ದೇನೆ. ನಾನು ನಿನ್ನ ಸಮನಾಗಿದ್ದರೂ ವಿಷ್ಣುವಿನ ಕಾರಣದಿಂದ ರಾಜ್ಯವು ನಿನ್ನಲ್ಲಿದೆ. ನನಗೆ ಕೂಡ ದಕ್ಷನ ಮಗಳು ಜನನಿ ಮತ್ತು ಕಶ್ಯಪನು ತಂದೆ. ನಿನ್ನಂತೆಯೇ ನಾನೂ ಕೂಡ ಸಮಸ್ತ ಲೋಕಗಳನ್ನು ಆಯಾಸಗೊಳ್ಳದೇ ಎತ್ತಿ ಹಿಡಿಯಬಲ್ಲೆ. ನನಗೆ ಕೂಡ ಸರ್ವಭೂತಗಳು ಸಹಿಸಲಾಗದ ವಿಪುಲ ಬಲವಿದೆ. ದೈತ್ಯರೊಂದಿಗೆ ಯುದ್ಧದಲ್ಲಿ ನಾನೂ ಕೂಡ ಮಹಾ ಕರ್ಮಗಳನ್ನು ಮಾಡಿದ್ದೇನೆ. ನಾನೂ ಕೂಡ ದಿತಿಯ ಮಕ್ಕಳಾದ ಶ್ರುತಶ್ರೀ, ಶ್ರುತಸೇನ, ವಿವಸ್ವಾನ್, ರೋಚನಾಮುಖ, ಪ್ರಸಭ, ಕಾಲಕಾಕ್ಷರನ್ನು ಸಂಹರಿಸಿದ್ದೇನೆ. ಒಮ್ಮೊಮ್ಮೆ ನಿನ್ನ ತಮ್ಮನ ಧ್ವಜಸ್ಥಾನಕ್ಕೆ ಹೋಗಿ ನಾನು ಅವನನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ ಮತ್ತು ಅವನನ್ನು ನಾನು ನನ್ನ ಬೆನ್ನ ಮೇಲೆ ಏರಿಸಿಕೊಂಡು ಕೊಂಡೊಯ್ಯುತ್ತೇನೆ. ಬಹುಷಃ ಈ ಕಾರಣದಿಂದಲೇ ನೀನು ನನ್ನನ್ನು ಕೀಳಾಗಿ ಕಾಣತ್ತಿದ್ದೀಯೆ. ಇಂಥಹ ಭಾರವನ್ನು ಹೊರಬಲ್ಲವರು ಬೇರೆ ಯಾರಿದ್ದಾರೆ? ನನಗಿಂತಲೂ ಬಲಶಾಲಿಗಳು ಬೇರೆ ಯಾರಿದ್ದಾರೆ? ನಾನು ಇಷ್ಟು ವಿಶಿಷ್ಟನಾಗಿದ್ದರೂ ಕೂಡ ಅವನನ್ನು ಬಾಂಧವರೊಂದಿಗೆ ಹೊರುತ್ತೇನೆ. ನನ್ನನ್ನ್ನು ಕಡೆಗಣಿಸಿ ನನ್ನ ಭೋಜನಕ್ಕೆ ಅಡ್ಡಿಯಾಗಿ ನೀನೂ ಕೂಡ ನಿನ್ನ ತಮ್ಮನಂತೆ ನನ್ನ ಗೌರವವನ್ನು ಕಳೆಯುತ್ತಿದ್ದೀಯೆ. ಅದಿತಿಯಲ್ಲಿ ಹುಟ್ಟಿದವರೆಲ್ಲ ಬಲವಿಕ್ರಮಶಾಲಿಗಳು. ಆದರೆ ಅವರಲ್ಲೆಲ್ಲಾ ನೀನೇ ವಿಶೇಷವಾಗಿರುವ ಬಲಶಾಲಿ. ಆದರೂ ನಾನು ನಿನ್ನನ್ನು ನನ್ನ ಒಂದೇ ಒಂದು ರೆಕ್ಕೆಯ ಮೇಲೆ ಏನೂ ಆಯಾಸವೆಲ್ಲದೇ ಹೊರುತ್ತೇನೆ. ಹೀಗಿರುವಾಗ ಇಲ್ಲಿ ಯಾರು ಬಲಶಾಲಿ ಎನ್ನುವುದನ್ನು ನೀನೇ ವಿಮರ್ಶಿಸಿ ಹೇಳು.”
ಆ ಖಗದ ಜಂಬದ ಮಾತುಗಳನ್ನು ಕೇಳಿ ತೊಂದರೆಗಳನ್ನು ಕೊಡಬಹುದೆಂದು ತಿಳಿದು ರಥಚಕ್ರಭೃತು ವಿಷ್ಣುವು ತಾರ್ಕ್ಷನಿಗೆ ಹೇಳಿದನು: “ಗುರುತ್ಮನ್! ತುಂಬಾ ದುರ್ಬಲನಾಗಿದ್ದರೂ ನಿನ್ನನ್ನು ನೀನೇ ಬಲವಂತನೆಂದು ಏಕೆ ಪರಿಗಣಿಸುತ್ತಿರುವೆ? ನಮ್ಮ ಎದಿರು ಈ ರೀತಿ ಆತ್ಮ ಸ್ತುತಿ ಮಾಡಿಕೊಳ್ಳುವುದು ನಿನಗೆ ಸರಿಯಲ್ಲ. ನನ್ನ ದೇಹವನ್ನು ಈ ಮೂರುಲೋಕಗಳು ಒಂದಾದರೂ ಹೊರಲು ಅಶಕ್ತ. ನಾನು ನನ್ನ ಮತ್ತು ನಿನ್ನ ಭಾರವನ್ನೂ ಸೇರಿ ಹೊತ್ತಿದ್ದೇನೆ. ಬಾ! ನನ್ನ ಈ ಒಂದು ಬಲ ತೋಳನ್ನು ನೀನು ಹೊರು. ನೀನು ಈ ಒಂದನ್ನು ಹೊತ್ತೆಯೆಂದಾದರೆ ನೀನು ಹೇಳಿದ್ದುದು ಸಫಲವಾದಂತೆ.”
ಆಗ ಆ ಭಗವಾನನು ತನ್ನ್ನ ತೋಳನ್ನು ಅವನ ಭುಜದ ಮೇಲಿರಿಸಿದನು. ಅವನು ಭಾರದಿಂದ ಬಳಲಿ ವಿಹ್ವಲನಾಗಿ ಮೂರ್ಛಿತನಾಗಿ ಬಿದ್ದನು. ಪರ್ವತಗಳಿಂದ ಕೂಡಿದ ಇಡೀ ಭೂಮಿಯ ಭಾರವು ಅವನ ದೇಹದ ಒಂದು ಶಾಖೆಯಲ್ಲಿದೆ ಎಂದು ಗರುಡನು ಅರಿತನು. ಅಚ್ಯುತನು ಅವನನ್ನು ತನ್ನ ಬಲದಿಂದ ಇನ್ನೂ ಹೆಚ್ಚಾಗಿ ಪೀಡಿಸಲಿಲ್ಲ. ಅವನ ಜೀವವನ್ನೂ ತೆಗೆದುಕೊಳ್ಳಲಿಲ್ಲ. ಆ ಖಗನು ಅತಿಭಾರದಿಂದ ಪೀಡಿತನಾಗಿ ವಿಹ್ವಲನಾಗಿ ದೇಹವು ಆಯಾಸಗೊಂಡು, ವಿಚೇತನನಾಗಿ ತನ್ನ ರೆಕ್ಕೆಗಳನ್ನು ಉದುರಿಸತೊಡಗಿದನು. ಆ ಪಕ್ಷಿ ವಿನತಾಸುತನು ಚೇತನವನ್ನು ಕಳೆದುಕೊಂಡು ವಿಹ್ವಲನಾಗಿ ದೀನನಾಗಿ ವಿಷ್ಣುವನ್ನು ಶಿರಸಾ ನಮಸ್ಕರಿಸಿ ಹೇಳಿದನು: “ಭಗವನ್! ಲೋಕಸಾರದ ಸದೃಶವಾಗಿರುವ, ಸುಂದರವಾದ ಈ ಭುಜದಿಂದ ಮುಕ್ತವಾಗಿ ಹೊರಚಾಚಿ ನೀನು ನನ್ನನ್ನು ಮಹೀತಲಕ್ಕೆ ಅಮುಕಿದ್ದೀಯೆ. ದೇವ! ವಿಹ್ವಲನಾಗಿರುವ, ಬಲದ ಅಗ್ನಿಯಲ್ಲಿ ಸುಟ್ಟುಹೋಗಿರುವ, ನಿನ್ನ ಧ್ವಜವಾಸಿಯಾದ ಈ ಅಲ್ಪಚೇತಸ ಪಕ್ಷಿ ನನ್ನನ್ನು ಕ್ಷಮಿಸಬೇಕು. ದೇವ! ಪರಮವಿಭೋ! ನಿನ್ನ ಬಲವನ್ನು ನಾನು ತಿಳಿಯಲಿಲ್ಲ. ಆದುದರಿಂದ ನನ್ನಷ್ಟು ಮತ್ತು ನನಗಿಂತಲೂ ಹೆಚ್ಚಿನ ವೀರನು ಬೇರೆ ಯಾರೂ ಇಲ್ಲ ಎಂದು ತಿಳಿದುಕೊಂಡಿದ್ದೆ.”
ಆಗ ಆ ಭಗವಾನನು ಗುರುತ್ಮತನ ಮೇಲೆ ಕರುಣೆತೋರಿದನು. ಮತ್ತು ಸ್ನೇಹದಿಂದ “ಮತ್ತೆ ಈ ರೀತಿ ಮಾಡಬೇಡ!” ಎಂದನು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ