ಇಂದ್ರವಿಜಯೋಽಪಖ್ಯಾನ

ಇಂದ್ರವಿಜಯದ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಸೇನೋಽದ್ಯೋಗಪರ್ವ (ಅಧ್ಯಾಯ ೯-೧೮) ದಲ್ಲಿ ಬರುತ್ತದೆ. ಈ ಕಥೆಯನ್ನು ಮೋಸಗೊಂಡು ದುರ್ಯೋಧನನ ಪಕ್ಷವನ್ನು ಸೇರಿದ ಶಲ್ಯನು ಯುಧಿಷ್ಠಿರನಿಗೆ ಹೇಳಿದನು.

Image result for flowers against white backgroundದೇವಶ್ರೇಷ್ಠ ಮಹಾತಪಸ್ವಿ ತ್ವಷ್ಟನು ಪ್ರಜಾಪತಿಯಾಗಿದ್ದಾಗ ಅವನು ಇಂದ್ರದ್ರೋಹದಿಂದ ತ್ರಿಶಿರನೆನ್ನುವ ಪುತ್ರನನ್ನು ಸೃಷ್ಟಿಸಿದನು. ಆ ವಿಶ್ವರೂಪೀ ಮಹಾದ್ಯುತಿಯು ಇಂದ್ರನ ಸ್ಥಾನವನ್ನು ಬಯಸಿದನು. ಸೂರ್ಯ, ಚಂದ್ರ ಮತ್ತು ಅಗ್ನಿಗಳಂತಿದ್ದ ಆ ಮೂರು ಘೋರ ಮುಖಗಳವನು ಒಂದರಿಂದ ವೇದಗಳನ್ನು ಪಠಿಸುತ್ತಿದ್ದನು, ಒಂದರಿಂದ ಸುರೆಯನ್ನು ಕುಡಿಯುತ್ತಿದ್ದನು ಮತ್ತು ಇನ್ನೊಂದರಿಂದ ಎಲ್ಲ ದಿಕ್ಕುಗಳನ್ನೂ ಕುಡಿದುಬಿಡುತ್ತಾನೋ ಎಂದು ನೋಡುತ್ತಿದ್ದನು. ಆ ತಪಸ್ವಿಯು ಮೃದುವೂ ದಾಂತನೂ ಆಗಿದ್ದು ಧರ್ಮದ ತಪಸ್ಸಿನಲ್ಲಿ ತೊಡಗಿಕೊಂಡಿದ್ದನು. ಅವನು ಆಚರಿಸಲು ಅತಿಕಷ್ಟವಾದ ಮಹಾ ತೀವ್ರ ತಪಸ್ಸನ್ನು ತಪಿಸಿದನು. ಆ ತಪೋವೀರ್ಯ, ಸತ್ವಯುತ, ಅಮಿತತೇಜಸನನ್ನು ನೋಡಿ ಇಂದ್ರನು ಇವನು ಇಂದ್ರನಾಗಬಾರದು ಎಂದು ವಿಷಾದಿಸಿದನು. “ಇವನು ಭೋಗಗಳಲ್ಲಿ ತೊಡಗುವಂತೆ ಹೇಗೆಮಾಡಬೇಕು? ಇವನು ಮಹಾತಪಸ್ಸನ್ನು ತಪಿಸದಂತೆ ಏನು ಮಾಡಬೇಕು? ವರ್ಧಿಸುತ್ತಿರುವ ತ್ರಿಶಿರನು ತ್ರಿಭುವನವೆಲ್ಲವನ್ನೂ ಕಬಳಿಸಿಬಿಡುತ್ತಾನೆ.” ಹೀಗೆ ಬಹಳಷ್ಟು ಯೋಚಿಸಿದ ಬುದ್ಧಿಮಾನನು ತ್ವಷ್ಟಪುತ್ರನ ಪ್ರಲೋಭನೆಗೆ ಅಪ್ಸರೆಯರಿಗೆ ಆಜ್ಞಾಪಿಸಿದನು: “ತ್ರಿಶಿರನನ್ನು ಕಾಮಭೋಗಗಳಲ್ಲಿ ತೊಡಗಿಸಿ. ಬೇಗನೇ ಹೋಗಿ ಕ್ಷಿಪ್ರದಲ್ಲಿಯೇ ಅವನನ್ನು ಪ್ರಲೋಭಗೊಳಿಸಿ. ಸುಶ್ರೋಣಿಯರೇ! ಶೃಂಗಾರವೇಷಗಳನ್ನು ಧರಿಸಿ ಮನೋಹರ ಭಾವಗಳಿಂದೊಡಗೂಡಿ ಅವನನ್ನು ಪ್ರಲೋಭಗೊಳಿಸಿ ಮತ್ತು ನನ್ನ ಭಯವನ್ನು ಶಮನಗೊಳಿಸಿ. ನಾನು ಅತ್ಮದಲ್ಲಿ ಅಸ್ವಸ್ಥ್ಯನಾಗಿರುವುದನ್ನು ಗಮನಿಸಿದ್ದೇನೆ. ಈ ಮಹಾಘೋರ ಭಯವನ್ನು ಕ್ಷಿಪ್ರದಲ್ಲಿ ನಾಶಗೊಳಿಸಿ.”

ಅಪ್ಸರೆಯರು ಹೇಳಿದರು: “ಶಕ್ರ! ಅವನನ್ನು ಪ್ರಲೋಭನಗೊಳಿಸಲು ಪ್ರಯತಿಸುತ್ತೇವೆ. ಬಲನಿಷೂದನ! ಅವನಿಂದ ನೀನು ಯಾವುದೇ ಭಯವನ್ನು ಹೊಂದಬೇಕಾಗಿಲ್ಲ. ಕಣ್ಣುಗಳಿಂದ ಎಲ್ಲವನ್ನೂ ಸುಟ್ಟುಬಿಡುವನೋ ಎಂದು ಕುಳಿತಿರುವ ಆ ತಪೋನಿಧಿಯನ್ನು ಪ್ರಲೋಭಗೊಳಿಸಲೂ ನಾವು ಒಟ್ಟಾಗಿ ಹೋಗುತ್ತೇವೆ. ಅವನನ್ನು ವಶೀಕರಿಸಲು ಮತ್ತು ನಿನ್ನ ಭಯವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತೇವೆ.”

ಇಂದ್ರನಿಂದ ಅನುಜ್ಞಾತರಾದ ಅವರು ತ್ರಿಶಿರನ ಬಳಿ ಹೋದರು. ಅಲ್ಲಿ ಆ ವರಾಂಗನೆಯರು ವಿವಿಧಭಾವಗಳಿಂದ, ನೃತ್ಯವನ್ನು ಮತ್ತು ಹಾಗೆಯೇ ಅಂಗ ಸೌಷ್ಟವವನ್ನು ಪ್ರದರ್ಶಿಸುತ್ತಾ ಅವನನ್ನು ಲೋಭಗೊಳಿಸಲು ಪ್ರಯತ್ನಿಸಿದರು. ಆ ಮಹಾತಪಸ್ವಿಯು ಅವರನ್ನು ನೋಡಿದರೂ ಹರ್ಷಿತನಾಗಲಿಲ್ಲ. ಇಂದ್ರಿಯಗಳನ್ನು ವಶೀಕರಿಸಿ ತುಂಬಿದ ಸಾಗರದಂತೆ ತೋರುತ್ತಿದ್ದನು. ಪರಮ ಯತ್ನವನ್ನು ಮಾಡಿ ಅವರು ಪುನಃ ಶಕ್ರನ ಉಪಸ್ಥಿತಿಯಲ್ಲಿ ಬಂದು, ಎಲ್ಲರೂ ಕೈಮುಗಿದು ದೇವರಾಜನಿಗೆ ಹೀಗೆ ಹೇಳಿದರು: “ಪ್ರಭೋ! ಆ ದುರ್ಧರ್ಷನನ್ನು ಧೈರ್ಯದಿಂದ ಅಲುಗಾಡಿಸಲು ಶಕ್ಯವಿಲ್ಲ. ಇದರ ನಂತರ ಏನು ಮಾಡಬೇಕೋ ಅದನ್ನು ಮಾಡು.”

ಮಹಾಮತಿ ಶಕ್ರನು ಅಪ್ಸರೆಯರನ್ನು ಗೌರವಿಸಿ ಕಳುಹಿಸಿಕೊಟ್ಟು ಆ ಮಹಾತ್ಮನ ವಧೆಯ ಉಪಾಯವನ್ನು ಚಿಂತಿಸತೊಡಗಿದನು. ಆ ವೀರ ಪ್ರತಾಪವಾನ್ ಧೀಮಾನ್ ದೇವರಾಜನು ತುಂಬಾ ಚಿಂತಿಸಿ ತ್ರಿಶಿರನ ವಧೆಯ ಕುರಿತು ನಿಶ್ಚಯಿಸಿದನು: “ಇಂದು ಈ ವಜ್ರವನ್ನು ಅವನ ಮೇಲೆ ಎಸೆಯುತ್ತೇನೆ. ಇದರಿಂದ ಅವನು ಕ್ಷಿಪ್ರವಾಗಿ ಕೊಲ್ಲಲ್ಪಡುತ್ತಾನೆ. ಎಷ್ಟೇ ದುರ್ಬಲನಾಗಿದ್ದ ಶತ್ರುವು ಪ್ರವೃದ್ಧನಾಗುತ್ತಿದ್ದಾನೆಂದರೆ ಬಲಶಾಲಿಯೂ ನಿರ್ಲಕ್ಷಿಸಬಾರದು.” ಶಾಸ್ತ್ರಬುದ್ಧಿಯನ್ನುಪಯೋಗಿಸಿ ನಿಶ್ಚಯಿಸಿ ವಧೆಗೆ ದೃಢ ಮನಸ್ಸುಮಾಡಿದನು. ಆಗ ಶಕ್ರನು ಸಂಕ್ರುದ್ಧನಾಗಿ ಅಗ್ನಿಯಂತೆ ಹೊಳೆಯುತ್ತಿರುವ, ಘೋರರೂಪೀ, ಭಯವನ್ನುಂಟುಮಾಡುವ ವಜ್ರವನ್ನು ತ್ರಿಶಿರನ ಮೇಲೆ ಎಸೆದನು. ವಜ್ರದಿಂದ ಜೋರಾಗಿ ಹೊಡೆಯಲ್ಪಟ್ಟು ಹತನಾಗಿ ಅವನು ಪರ್ವತಶಿಖರವು ಮಣ್ಣಾಗಿ ನೆಲಕ್ಕೆ ಬೀಳುವಂತೆ ಬಿದ್ದನು. ಅವನು ವಜ್ರದಿಂದ ಹತನಾಗಿ ಮಲಗಿದ ಪರ್ವತದಂತಿರುವುದನ್ನು ನೋಡಿ ದೇವೇಂದ್ರನು ಶಾಂತಿಯನ್ನು ಪಡೆಯಲಿಲ್ಲ. ಅವನು ತೇಜಸ್ಸಿನಿಂದ ಬೆಳಗುತ್ತಿದ್ದನು. ಹತನಾದರೂ ಆ ದೀಪ್ತ ತೇಜಸ್ವಿಯು ಜೀವಂತನಾದ್ದಾನೋ ಎಂದು ತೋರಿದನು. ಭಯಕ್ಕೆ ಸಿಲುಕಿದ ಶಚೀಪತಿಯು ಆಗ ಅಲ್ಲಿಗೆ ಬಂದ ಬಡಿಗನನ್ನು ನೋಡಿದನು. ತಕ್ಷಣವೇ ಪಾಕಶಾಸನನು ಅವನಿಗೆ ಹೇಳಿದನು: “ಬೇಗನ ಇವನ ಶಿರಗಳನ್ನು ಕತ್ತರಿಸು. ನನ್ನ ಮಾತಿನಂತೆ ಮಾಡು.”

ಬಡಿಗನು ಹೇಳಿದನು: “ಇವನ ಭುಜಗಳು ತುಂಬಾ ದೊಡ್ಡವು. ಈ ಗರಗಸೆಯಿಂದ ಅದು ತುಂಡಾಗುವುದಿಲ್ಲ. ಒಳ್ಳೆಯವರು ಅಲ್ಲಗಳೆಯುವ ಕೆಲಸವನ್ನು ಮಾಡಲೂ ನನಗೆ ಇಷ್ಟವಿಲ್ಲ.”

ಇಂದ್ರನು ಹೇಳಿದನು: “ಹೆದರಬೇಡ! ಬೇಗನೆ ನಾನು ಹೇಳಿದಂತೆ ಮಾಡು. ನನ್ನ ಪ್ರಸಾದದಿಂದ ನಿನ್ನ ಗರಗಸವು ವಜ್ರಕಲ್ಪವಾಗುತ್ತದೆ.”

ಬಡಿಗನು ಹೇಳಿದನು: “ಇಂದು ಈ ಘೋರಕರ್ಮವನ್ನು ಮಾಡಿರುವ ನೀನು ಯಾರೆಂದು ನಾನು ತಿಳಿಯಬೇಕು? ಇದನ್ನು ಕೇಳಲು ಬಯಸುತ್ತೇನೆ. ಸತ್ಯವನ್ನು ಹೇಳು.”

ಇಂದ್ರನು ಹೇಳಿದನು: “ನಾನು ದೇವರಾಜ ಇಂದ್ರ. ಇದು ನಿನಗೆ ತಿಳಿದಿರಲಿ. ನಾನು ಹೇಳಿದಹಾಗೆ ನೀನು ಮಾಡುತ್ತೀಯೆ. ಬಡಿಗ! ವಿಚಾರಮಾಡಬೇಡ!”

ಬಡಿಗನು ಹೇಳಿದನು: “ಶಕ್ರ! ಈ ಕ್ರೂರ ಕರ್ಮದಿಂದ ನೀನು ಹೇಗೆ ತಾನೇ ಪರಿತಪಿಸುತ್ತಿಲ್ಲ? ಈ ಋಷಿಪುತ್ರನನ್ನು ಕೊಂದು ನಿನಗೆ ಹೇಗೆ ಬ್ರಹ್ಮಹತ್ಯೆಯ ಭಯವಿಲ್ಲ?”

ಇಂದ್ರನು ಹೇಳಿದನು: “ಈ ರೀತಿ ಕೆಟ್ಟದ್ದಾಗಿ ನಡೆದುಕೊಂಡಿದ್ದುದಕ್ಕೆ ಪಾವನಗೊಳ್ಳಲು ನಾನು ಅನಂತರ ಧರ್ಮದಿಂದ ನಡೆದುಕೊಳ್ಳುತ್ತೇನೆ. ಈ ಮಹಾವೀರ್ಯವಂತನು ನನ್ನ ಶತ್ರುವಾಗಿದ್ದನು. ನನ್ನ ವಜ್ರದಿಂದ ಹತನಾದನು. ಬಡಿಗ! ಈಗಲೂ ಕೂಡ ನಾನು ಉದ್ವಿಗ್ನನಾಗಿದ್ದೇನೆ. ಇವನಿಂದ ಈಗಲೂ ಭಯಗೊಳ್ಳುತ್ತೇನೆ. ಬೇಗನೆ ಇವನ ಶಿರಗಳನ್ನು ಕತ್ತರಿಸು. ನಿನಗೆ ಅನುಗ್ರಹವನ್ನು ಮಾಡುತ್ತೇನೆ. ಯಜ್ಞಗಳಲ್ಲಿ ಮಾನವರು ಪಶುವಿನ ಶಿರೋಭಾಗವನ್ನು ನಿನಗೆ ನೀಡುತ್ತಾರೆ. ಈ ಅನುಗ್ರಹವನ್ನು ನಾನು ನಿನಗೆ ನೀಡುತ್ತಿದ್ದೇನೆ. ನನಗೆ ಪ್ರಿಯವಾದುದನ್ನು ಬೇಗ ಮಾಡು!”

ಆಗ ಮಹೇಂದ್ರನ ಈ ಮಾತನ್ನು ಕೇಳಿದ ಬಡಿಗನು ತಕ್ಷಣವೇ ತ್ರಿಶಿರನ ತಲೆಗಳನ್ನು ಕೊಡಲಿಯಿಂದ ತುಂಡರಿಸಿದನು. ತಲೆಗಳನ್ನು ತುಂಡರಿಸಲು ತ್ರಿಶಿರಗಳಿಂದ ಬಹಳಷ್ಟು ಗಿಳಿಗಳು, ಕೋಗಿಲೆಗಳು ಮತ್ತು ಗುಬ್ಬಿಗಳು ಹೊರಹಾರಿ ಬಂದವು. ಯಾವ ಬಾಯಿಯಿಂದ ವೇದಗಳನ್ನು ಪಠಿಸುತ್ತಿದ್ದನೋ ಮತ್ತು ಸೋಮವನ್ನು ಕುಡಿಯುತ್ತಿದ್ದನೋ ಆ ಬಾಯಿಯಿಂದ ಒಂದೇಸಮನೆ ಕಪಿಂಜಲಗಳು ಹಾರಿಬಂದವು. ಯಾವುದರಿಂದ ದಿಕ್ಕುಗಳೆಲ್ಲವನ್ನೂ ಕುಡಿದುಬಿಡುವವನಂತೆ ನೋಡುತ್ತಿದ್ದನೋ ಆ ಮುಖದಿಂದ ಬಹಳಷ್ಟು ಕೋಗಿಲೆಗಳು ಹೊರಬಂದವು. ಯಾವುದರಿಂದ ಸುರಾಪಾನ ಮಾಡುತ್ತಿದ್ದನೋ ತ್ರಿಶಿರನ ಆ ಮುಖದಿಂದ ಗುಬ್ಬಿ-ಗಿಡುಗಗಳು ಹೊರಬಂದವು. ತಲೆಗಳು ತುಂಡರಿಸಲ್ಪಡಲು ಮಘವತನು ವಿಜ್ವರನಾದನು. ಸಂತೋಷಗೊಂಡು ತ್ರಿದಿವಕ್ಕೆ ಹೋಗಿ ಸ್ವಗೃಹವನ್ನು ಸೇರಿದನು.

ಪ್ರಜಾಪತಿ ತ್ವಷ್ಟನು ಶಕ್ರನಿಂದ ತನ್ನ ಮಗನು ಹತನಾದುದನ್ನು ಕೇಳಿ ಕ್ರೋಧದಿಂದ ಕಣ್ಣುಗಳು ಕೆಂಪಾಗಲು ಹೀಗೆ ಹೇಳಿದನು: “ತಪಸ್ಸನ್ನು ತಪಿಸುತ್ತಿರುವ, ನಿತ್ಯವೂ ಕ್ಷಾಂತ, ದಾಂತ ಮತ್ತು ಜಿತೇಂದ್ರಿಯನಾಗಿ ಅನಾಪರಾಧಿಯಾಗಿದ್ದ ನನ್ನ ಪುತ್ರನನ್ನು ಯಾರು ಹಿಂಸಿಸಿದ್ದಾನೋ ಆ ಶಕ್ರನ ವಧೆಗಾಗಿ ನಾನು ವೃತ್ರನನ್ನು ಉತ್ಪಾದಿಸುತ್ತಿದ್ದೇನೆ. ನನ್ನ ವೀರ್ಯವನ್ನು ಮತ್ತು ತಪಸ್ಸಿನ ಮಹಾಬಲವನ್ನು ಲೋಕಗಳು ನೋಡಲಿ! ದುರಾತ್ಮ ಪಾಪಚೇತನ ದೇವೇಂದ್ರನೂ ಇದನ್ನು ನೋಡಲಿ.”

ಆಗ ಆ ಸುಮಹಾಯಶ ಕೃದ್ಧತಪಸ್ವಿಯು ನೀರನ್ನು ಮುಟ್ಟಿ, ಅಗ್ನಿಯಲ್ಲಿ ಆಹುತಿಯನ್ನು ಹಾಕಿ ಘೋರ ವೃತ್ರನನ್ನು ಉತ್ಪಾದಿಸಿ ಹೇಳಿದನು: “ಇಂದ್ರಶತ್ರುವೇ! ನನ್ನ ತಪಸ್ಸಿನ ಪ್ರಭಾವದಿಂದ ವಿವರ್ಧನಾಗು.” ಸೂರ್ಯ-ಅಗ್ನಿಯರ ಸರಿಸಮನಾದ ಅವನು ದಿವವನ್ನು ಸ್ತಬ್ಧಗೊಳಿಸಿ ಬೆಳೆದನು. ಕಾಲಸೂರ್ಯನಂತೆ ಮೇಲೆದ್ದು “ಏನು ಮಾಡಲಿ?” ಎಂದು ಕೇಳಿದನು. “ಇಂದ್ರನನ್ನು ಕೊಲ್ಲು!” ಎಂದು ಹೇಳಿ ಅವನು ತ್ರಿದಿವಕ್ಕೆ ತೆರಳಿದನು. ಆಗ ವೃತ್ರ-ವಾಸವರ ನಡುವೆ ಯುದ್ಧವು ನಡೆಯಿತು. ವೃತ್ರನು ವೀರ ಶತಕ್ರತು ದೇವೇಂದ್ರನನ್ನು ಹಿಡಿದನು. ಅವನನ್ನು ಜೋರಾಗಿ ತಿರುಗಿಸಿ ಕ್ರೋಧಸಮನ್ವಿತನಾದ ವೃತ್ರನು ನುಂಗಿದನು. ವೃತ್ರನಿಂದ ಶಕ್ರನು ನುಂಗಲ್ಪಡಲು ಮಹಾಸತ್ವಶಾಲೀ ತ್ರಿದಶರು ಸಂಭ್ರಾಂತರಾಗಿ ವೃತ್ರನಾಶಿನೀ ಜೃಂಭಿಕೆ (ಆಕಳಿಕೆ) ಯನ್ನು ಸೃಷ್ಟಿಸಿದರು. ವೃತ್ರನು ಆಕಳಿಸಲು ಬಾಯಿ ತೆರೆದಾಗ ಬಲಸೂದನನು ತನ್ನ ಅಂಗಾಂಗಗಳನ್ನು ಸಂಕ್ಷಿಪ್ತಗೊಳಿಸಿ ಹೊರಬಂದನು. ಅಂದಿನಿಂದ ಲೋಕದಲ್ಲಿ ಜೃಂಭಿಕೆಯು ಪ್ರಾಣಿಗಳಲ್ಲಿ ಸಂಶ್ರಿತವಾದಳು.

ಶಕ್ರನು ಹೊರಬಂದುದನು ನೋಡಿದ ಎಲ್ಲ ಸುರರೂ ಸಂತುಷ್ಟರಾದರು. ಆಗ ಪುನಃ ವೃತ್ರ ವಾಸವರ ನಡುವೆ ಯುದ್ಧವು ಪ್ರಾರಂಭವಾಯಿತು. ಆ ಘೋರ ಮಹಾಯುದ್ಧವು ತುಂಬಾ ಸಮಯದವರೆಗೆ ನಡೆಯಿತು. ರಣದಲ್ಲಿ ತನ್ನ ಮತ್ತು ತ್ವಷ್ಟನ ತಪೋಬಲದಿಂದ ಬಲಸಮನ್ವಿತ ವೃತ್ರನು ವರ್ಧಿಸಿ ಅವನದೇ ಮೇಲ್ಗೈಯಾಗಲು ಶಕ್ರನು ಹಿಂದೆ ಸರಿದನು. ಅವನು ಹಿಂದೆ ಸರಿಯಲು ದೇವತೆಗಳು ಪರಮ ವಿಷಾದಗೊಂಡರು. ಶಕ್ರನ ಜೊತೆಗೆ ಅವರು ಕೂಡ ತ್ವಷ್ಟನ ತೇಜಸ್ಸಿನಿಂದ ವಿಮೋಹಿತರಾದರು. ಆಗ ಅವರೆಲ್ಲರೂ ಮುನಿಗಳನ್ನು ಕೂಡಿ ಮಂತ್ರಾಲೋಚನೆಗೈದರು. ಏನು ಮಾಡಬೇಕು ಎಂದು ಚಿಂತಿಸಿ ಭಯಮೋಹಿತರಾಗಿ, ವೃತ್ರನ ವಧೆಯನ್ನು ಬಯಸಿದ ಎಲ್ಲರೂ ಮಹಾತ್ಮ, ಅವ್ಯಯ, ಮಂದರಾಗ್ರದಲ್ಲಿ ಕುಳಿತಿರುವ ವಿಷ್ಣುವನ್ನು ನೆನೆದರು. ಇಂದ್ರನು ಹೇಳಿದನು: “ದೇವತೆಗಳೇ! ಈ ಅವ್ಯಯ ಜಗತ್ತೆಲ್ಲವೂ ವೃತ್ರನಿಂದ ವ್ಯಾಪ್ತಗೊಂಡಿದೆ. ಅವನನ್ನು ಎದುರಿಸುವಂತಹುದು ಯಾವುದೂ ಇಲ್ಲವೆನಿಸುತ್ತಿದೆ. ಹಿಂದೆ ನಾನು ಸಮರ್ಥನಾಗಿದ್ದೆ. ಆದರೆ ಈಗ ಅಸಮರ್ಥನಾಗಿದ್ದೇನೆ. ನಿಮ್ಮೆಲ್ಲರ ಭದ್ರತೆಗೆ ಏನು ಮಾಡಲಿ? ಅವನು ದುಷ್ಪ್ರಧರ್ಷನೆಂದು ನನ್ನ ಅಭಿಪ್ರಾಯ. ಯುದ್ಧದಲ್ಲಿ ಅಮಿತವಿಕ್ರಮಿಯಾದ ಆ ತೇಜಸ್ವೀ ಮಹಾತ್ಮನು ದೇವಾಸುರಮಾನುಷರನ್ನೂ ಸೇರಿಸಿ ಮೂರು ಭುವನಗಳನ್ನು ನುಂಗಲು ಸಮರ್ಥನಾಗಿದ್ದಾನೆ. ಆದುದರಿಂದ ದಿವೌಕಸರೇ! ನನ್ನ ಈ ನಿಶ್ಚಯವನ್ನು ಕೇಳಿ. ಒಟ್ಟಿಗೇ ಮಹಾತ್ಮ ವಿಷ್ಣುವನಲ್ಲಿಗೆ ಹೋಗಿ ಅವನ ಸಲಹೆಯಂತೆ ಈ ದುರಾತ್ಮನ ವಧೆಯ ಉಪಾಯವನ್ನು ಮಾಡಬೇಕು.”

ಮಘವತನು ಹೀಗೆ ಹೇಳಲು ದೇವತೆ ಋಶಿಗಣಗಳು ಮಹಾಬಲ, ಶರಣ್ಯ, ದೇವ ವಿಷ್ಣುವಿನ ಶರಣುಹೊಕ್ಕರು. ವೃತ್ರನಿಂದ ಭಯಾರ್ದಿತ ಅವರೆಲ್ಲರೂ ದೇವೇಶ ವಿಷ್ಣುವಿಗೆ ಹೇಳಿದರು: “ಪ್ರಭೋ! ಹಿಂದೆ ನೀನು ಮೂರು ಲೋಕಗಳನ್ನು ಮೂರು ಹೆಜ್ಜೆಗಳಲ್ಲಿ ಆವರಿಸಿದ್ದೆ. ಅಮೃತವನ್ನು ಅಪಹರಿಸಿ ನೀನು ರಣದಲ್ಲಿ ದೈತ್ಯರನ್ನು ಸಂಹರಿಸಿದ್ದೆ. ಮಹಾದೈತ್ಯ ಬಲಿಯನ್ನು ಬಂಧಿಸಿ ಶಕ್ರನನ್ನು ದೇವಾಧಿಪನನ್ನಾಗಿ ಮಾಡಿದೆ. ಸರ್ವಲೋಕಗಳ ಪ್ರಭು ನೀನು. ಇವೆಲ್ಲವೂ ನಿನ್ನಿಂದ ತುಂಬಿದೆ. ನೀನೇ ದೇವ, ಮಹಾದೇವ ಮತ್ತು ಸರ್ವಲೋಕನಮಸ್ಕೃತ. ನೀನು ಇಂದ್ರನೊಂದಿಗೆ ದೇವತೆಗಳ ಗತಿಯಾಗು. ಈ ಜಗತ್ತೆಲ್ಲವೂ ವೃತ್ರನಿಂದ ವ್ಯಾಪಿತಗೊಂಡಿದೆ.”

ವಿಷ್ಣುವು ಹೇಳಿದನು: “ನಿಮ್ಮ ಉತ್ತಮ ಹಿತಕ್ಕಾಗಿ ಅವಶ್ಯವಾದುದನ್ನು ನಾನು ಮಾಡಲೇಬೇಕು. ಆದುದರಿಂದ ಅವನು ಇಲ್ಲದಂತೆ ಮಾಡುವ ಉಪಾಯವನ್ನು ಹೇಳುತ್ತೇನೆ. ಋಷಿಗಂಧರ್ವರೊಡನೆ ವಿಶ್ವರೂಪವನ್ನು ತಾಳಿರುವ ವೃತ್ರನಿರುವಲ್ಲಿಗೆ ಹೋಗಿ. ಅವನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ಇದರಿಂದ ನೀವು ಅವನನ್ನು ಗೆಲ್ಲಬಲ್ಲಿರಿ. ದೇವತೆಗಳೇ! ಶಕ್ರನಿಗೆ ನನ್ನ ತೇಜಸ್ಸೇ ಗತಿ. ಅದೃಶ್ಯನಾಗಿದ್ದುಕೊಂಡು ನಾನು ಆ ಉತ್ತಮ ವಜ್ರಾಯುಧವನ್ನು ಪ್ರವೇಶಿಸುತ್ತೇನೆ. ಹೊರಡಿ! ಆದಷ್ಟು ಬೇಗ ಋಷಿ-ಗಂಧರ್ವರೊಡಗೂಡಿ ವೃತ್ರನೊಂದಿಗೆ ಶಕ್ರನ ಸಂಧಿಯನ್ನು ಮಾಡಿಸಿ.”

ದೇವನು ಹೀಗೆ ಹೇಳಲು ಋಷಿಗಳು, ತ್ರಿದಶರು, ಒಂದಾಗಿ ಶಕ್ರನನ್ನು ಮುಂದಿಟ್ಟುಕೊಂಡು ಹೋದರು. ಶಕ್ರನೊಂದಿಗೆ ದೇವತೆಗಳೆಲ್ಲರೂ ಸಮೀಪಕ್ಕೆ ಬಂದು ತೇಜಸ್ಸಿನಿಂದ ಪ್ರಜ್ವಲಿಸಿ ದಶದಿಶಗಳನ್ನೂ ಸುಡುತ್ತಿರುವ, ಸೂರ್ಯ-ಚಂದ್ರರಂತಿರುವ, ಮೂರು ಲೋಕಗಳನ್ನೂ ಕಬಳಿಸುವಂತಿರುವ ಆ ಮಹೌಜಸ ವೃತ್ರನನ್ನು ನೋಡಿದರು. ಋಷಿಗಳು ಬಂದು ವೃತ್ರನಿಗೆ ಈ ಪ್ರಿಯ ಮಾತುಗಳನ್ನಾಡಿದರು: “ದುರ್ಜಯ! ನಿನ್ನ ತೇಜಸ್ಸು ಈ ಜಗತ್ತೆಲ್ಲವನ್ನೂ ಆವರಿಸಿದೆ. ಭೂರಿವಿಕ್ರಮ ವಾಸವನನ್ನು ಸೋಲಿಸಲು ನಿನಗೆ ಶಕ್ಯವಿಲ್ಲ. ಈ ಮಹಾಯುದ್ಧವು ಪ್ರಾರಂಭಿಸಿ ಬಹುಕಾಲವು ಕಳೆದುಹೋಯಿತು. ದೇವಾಸುರ-ಮಾನವರೂ ಸೇರಿ ಎಲ್ಲ ಪ್ರಜೆಗಳೂ ಪೀಡೆಗೊಳಗಾಗಿದ್ದಾರೆ. ವೃತ್ರ! ಶಕ್ರನೊಂದಿಗೆ ನಿನ್ನ ನಿತ್ಯ ಸಖ್ಯವಾಗಲಿ. ಶಕ್ರಲೋಕದಲ್ಲಿ ನೀನು ಶಾಶ್ವತ ಸುಖವನ್ನು ಹೊಂದುವೆ.”

ಋಷಿಗಳ ಮಾತುಗಳನ್ನು ಸುಮಹಾಬಲ ವೃತ್ರಾಸುರನು ಕೇಳಿ, ಅವರೆಲ್ಲರಿಗೆ ತಲೆಬಾಗಿ ನಮಸ್ಕರಿಸಿ ಹೇಳಿದನು: “ಎಲ್ಲ ಗಂಧರ್ವರೂ ಮತ್ತು ಮಹಾಭಾಗ ನೀವೆಲ್ಲರೂ ಹೇಳಿದುದನ್ನು ನಾನು ಕೇಳಿದೆ. ಅನಘರೇ! ಈಗ ನಾನು ಹೇಳುವುದನ್ನೂ ಕೇಳಿ. ನನ್ನ ಮತ್ತು ಶಕ್ರನ ನಡುವೆ ಸಂಧಿಯು ಹೇಗಾದೀತು? ಇಬ್ಬರು ತೇಜಸ್ವಿ ದ್ರೋಹಿಗಳ ಮಧ್ಯೆ ಸಖ್ಯವು ಹೇಗಾಗಬಹುದು?”

ಋಷಿಗಳು ಹೇಳಿದರು: “ಸಕೃತರರಲ್ಲಿ ಗೆಳೆತನವು ಒಂದೇ ಭೇಟಿಯಲ್ಲಾಗುವುದು ಒಳ್ಳೆಯದೇ. ಅದರ ನಂತರ ನಡೆಯುವಂಥಹುದು ನಡೆಯಲೇ ಬೇಕಾಗಿರುವ ವಿಧಿವಿಹಿತವಾದುದು. ಆದುದರಿಂದ ಸತ್ಪುರುಷರೊಡನೆ ಸಖ್ಯದ ಅವಕಾಶವನ್ನು ಕಡೆಗಾಣಿಸಬಾರದು. ಆದುದರಿಂದ ಒಳ್ಳೆಯವರೊಂದಿಗೆ ಸಖ್ಯವನ್ನು ಬಯಸಬೇಕು.  ಸತ್ಯವಂತರೊಂದಿಗಿನ ಸಖ್ಯವು ಕಷ್ಟದಲ್ಲಿ ಬರುವ ಸಂಪತ್ತಿನಂತೆ ದೃಢವೂ ನಿತ್ಯವೂ ಆದುದು. ಸತ್ಪುರುಷರೊಂದಿಗಿನ ಸಖ್ಯವು ಮಹಾ ಐಶ್ವರ್ಯವಿದ್ದಂತೆ. ಆದುದರಿಂದ ಸತ್ಯವಂತರನ್ನು ಕೊಲ್ಲಬಾರದು. ಇಂದ್ರನು ಸತ್ಯವಂತರಿಂದ ಗೌರವಿಸಲ್ಪಟ್ಟವನು ಮತ್ತು ಮಹಾತ್ಮರ ನಿವಾಸ. ಸತ್ಯವಾದೀ, ಹೃದಯವಂತ ಮತ್ತು ಧರ್ಮನಿಶ್ಚಯಗಳನ್ನು ತಿಳಿದವನು. ಶಕ್ರನೊಂದಿಗೆ ನಿನ್ನ ಶಾಶ್ವತ ಸಂಧಿಯಾಗಲಿ. ಈ ರೀತಿ ನಿನಗೆ ಅವನ ಮೇಲೆ ವಿಶ್ವಾಸ ಬರಲಿ. ಅನ್ಯಥಾ ವಿಚಾರಮಾಡಬೇಡ.”

ಮಹರ್ಷಿಗಳ ಮಾತನ್ನು ಕೇಳಿ ಆ ಮಹಾದ್ಯುತಿಯು ಹೇಳಿದನು: “ಭಗವಂತ ತಪಸ್ವಿಗಳನ್ನು ನಾನು ಅವಶ್ಯವಾಗಿಯೂ ಮನ್ನಿಸುತ್ತೇನೆ. ನಾನು ಏನನ್ನು ಹೇಳುತ್ತೇನೋ ಅವೆಲ್ಲವನ್ನೂ ದೇವತೆಗಳು ಮಾಡಲಿ. ಆಗ ದ್ವಿಜರ್ಷಭರು ಹೇಳಿದುದೆಲ್ಲವನ್ನೂ ನಾನು ಮಾಡುತ್ತೇನೆ. ವಿಪ್ರೇಂದ್ರರೇ! ಒಣಗಿದುದರಿಂದಾಲೀ ಒದ್ದೆಯಾಗಿದುದರಿಂದಾಗಲೀ, ಕಲ್ಲಿನಿಂದಾಗಲೀ ಮರದಿಂದಾಗಲೀ, ಶಸ್ತ್ರದಿಂದಾಗಲೀ ವಜ್ರದಿಂದಾಗಲೀ, ದಿನದಲ್ಲಿಯಾಗಲೀ ರಾತ್ರಿಯಲ್ಲಾಗಲೀ ಶಕ್ರನು ಅಥವಾ ದೇವತೆಗಳು ನನ್ನನ್ನು ಕೊಲ್ಲದಿರಲಿ. ಶಕ್ರನೊಂದಿಗೆ ಈ ರೀತಿಯ ನಿತ್ಯ ಸಂಧಿಯು ನನಗೆ ಇಷ್ಟವಾಗುತ್ತದೆ.”

“ಒಳ್ಳೆಯದು” ಎಂದು ಋಷಿಗಳು ಹೇಳಿದರು. ಈ ರೀತಿ ಸಂಧಾನವನ್ನು ಮಾಡಿಕೊಂಡು ವೃತ್ರನು ಪರಮ ಮುದಿತನಾದನು. ಹಾಗೆಯೇ ಶಕ್ರನೂ ಕೂಡ ಸಂತುಷ್ಟನಾದರೂ ಅವನು ಸದಾ ವ್ಯಾಕುಲಗೊಂಡು ವೃತ್ರನ ವಧೆಯ ಕುರಿತ ಉಪಾಯವನ್ನು ಯೋಚಿಸುತ್ತಿದ್ದನು. ಬಲವೃತ್ರಹನು ಸದಾ ಅವಕಾಶದ ರಂಧ್ರವನ್ನು ಹುಡುಕುವುದರಲ್ಲಿ ನಿರತನಾಗಿದ್ದನು.

ಒಮ್ಮೆ ಅವನು ಸಂಧ್ಯಾಕಾಲದ ರಮ್ಯವೂ ದಾರುಣವೂ ಆದ ಮುಹೂರ್ತವು ಸನ್ನಿಹಿತವಾಗುವಾಗ ಆ ಮಹಾಸುರನನ್ನು ಸಮುದ್ರದ ಅಂಚಿನಲ್ಲಿ ಕಂಡನು. ಆಗ ಭಗವಾನನು ಆ ಮಹಾತ್ಮನಿಗೆ ನೀಡಿದ ವರದ ಕುರಿತು ಯೋಚಿಸಿದನು: “ಇದು ರೌದ್ರವಾದ ಸಂಧ್ಯಾಸಮಯ. ರಾತ್ರಿಯೂ ಅಲ್ಲ ದಿವಸವೂ ಅಲ್ಲ. ನನ್ನಿಂದ ಎಲ್ಲವನ್ನೂ ಅಪಹರಿಸಿದ ನನ್ನ ಈ ಶತ್ರು ವೃತ್ರನನ್ನು ನಾನು ಅವಶ್ಯವಾಗಿ ವಧಿಸುತ್ತೇನೆ. ಇಂದು ನಾನು ವಂಚಿಸಿ ಈ ಮಹಾಬಲ ಮಹಾಕಾಯ ಮಹಾಸುರನನ್ನು ಕೊಲ್ಲದೇ ಇದ್ದರೆ ನನಗೆ ಶ್ರೇಯಸ್ಸುಂಟಾಗುವುದಿಲ್ಲ.” ಈ ರೀತಿ ಆಲೋಚಿಸಿ ಶಕ್ರನು ವಿಷ್ಣುವನ್ನು ಸ್ಮರಿಸಿದನು. ಅಗ ಸಮುದ್ರದಲ್ಲಿ ಪರ್ವತೋಪಮ ನೊರೆಯು ಕಾಣಿಸಿಕೊಂಡಿತು. “ಇದು ಒಣಗಿಯೂ ಇಲ್ಲ ಒದ್ದೆಯಾಗಿಯೂ ಇಲ್ಲ. ಹಾಗೆಯೇ ಇದು ಶಸ್ತ್ರವೂ ಅಲ್ಲ. ಇದನ್ನು ಎಸೆಯುತ್ತೇನೆ. ಕ್ಷಣದಲ್ಲಿಯೇ ವೃತ್ರನು ನಾಶಗೊಳ್ಳುತ್ತಾನೆ.” ಅವನು ಆಗ ವಜ್ರವನ್ನು ನೊರೆಯಲ್ಲಿ ಅದ್ದಿ ವೃತ್ರನೆಡೆ ಎಸೆದನು. ಆಗ ವಿಷ್ಣುವು ನೊರೆಯನ್ನು ಪ್ರವೇಶಿಸಿ ವೃತ್ರನನ್ನು ನಾಶಗೊಳಿಸಿದನು. ವೃತ್ರನು ಹತನಾಗಲು ದಿಕ್ಕುಗಳು ಕತ್ತಲೆರಹಿತವಾದವು. ಸುಖಕರ ಗಾಳಿಯು ಬೀಸಿತು. ಪ್ರಜೆಗಳೆಲ್ಲರೂ ಹರ್ಷಿತರಾದರು.

ಆಗ ದೇವತೆಗಳು ಮತ್ತು ಋಷಿಗಳು ಗಂಧರ್ವ, ಯಕ್ಷ, ರಾಕ್ಷಸ, ಪನ್ನಗರೊಡನೆ ಮಹೇಂದ್ರನನ್ನು ವಿವಿಧ ಸ್ತವಗಳಿಂದ ಸ್ತುತಿಸಿದರು. ಸರ್ವಭೂತಗಳಿಂದ ನಮಸ್ಕರಿಸಲ್ಪಟ್ಟ ವಾಸವನು ಸರ್ವಭೂತಗಳನ್ನು ಸಂತವಿಸಿ ಶತ್ರುವು ಹತನಾದನೆಂದು ಪ್ರಹೃಷ್ಟಾತ್ಮನಾಗಿ ದೇವತೆಗಳೊಂದಿಗೆ ತ್ರಿಭುವನಶ್ರೇಷ್ಠ ವಿಷ್ಣುವನ್ನು ಧರ್ಮವತ್ತಾಗಿ ಪೂಜಿಸಿದನು. ದೇವಭಯಂಕರ ಮಹಾವೀರ್ಯ ವೃತ್ರನು ಹತನಾಗಲು ಶಕ್ರನು ಸುಳ್ಳಿನಿಂದ ಅಭಿಭೂತನಾಗಿ ಮತ್ತು ಹಿಂದೆ ಮಾಡಿದ ತ್ರಿಶಿರ ಬ್ರಹ್ಮಹತ್ಯೆಯಿಂದ ಅಭಿಭೂತನಾಗಿ ಪರಮ ದುಃಖಿತನಾದನು. ಅವನು ಲೋಕಗಳ ಆಳವನ್ನು ಸೇರಿ ಸಂಜ್ಞೆಗಳನ್ನು ಕಳೆದುಕೊಂಡು ವಿಚೇತನನಾದನು. ತನ್ನದೇ ಪಾಪಗಳಿಂದ ಅಭಿಭೂತನಾಗಿ ದೇವೇಂದ್ರನು ಗುರುತಿಗೇ ಸಿಗದಂತಾದನು. ಒದ್ದಾಡುತ್ತಿರುವ ಹಾವಿನಂತೆ ನೀರಿನಲ್ಲಿ ಅಡಗಿಕೊಂಡು ವಾಸಿಸಿದನು.

ಬ್ರಹ್ಮಹತ್ಯೆಯ ಭಯದಿಂದ ಪೀಡಿತನಾದ ದೇವೇಂದ್ರನನ್ನು ಕಳೆದುಕೊಂಡ ಭೂಮಿಯಲ್ಲಿ ಮಹಾ ವಿಧ್ವಂಸವು ನಡೆಯಿತೋ ಎನ್ನುವ ಹಾಗೆ ಮರಗಳನ್ನು ಕಳೆದುಕೊಂಡು, ಕಾನನಗಳು ಒಣಗಿ, ನದಿಗಳ ಪ್ರವಾಹವು ತುಂಡಾಗಿ, ಸರೋವರಗಳು ನೀರಿಲ್ಲಿದಂತಾದವು. ಅನಾವೃಷ್ಟಿಯಿಂದ ಸತ್ವಗಳಲ್ಲಿ ಸಂಕ್ಷೋಭೆಗೊಂಡಿತು. ದೇವತೆಗಳೂ ಎಲ್ಲ ಮಹರ್ಷಿಗಳೂ ತುಂಬಾ ಪೀಡಿತರಾದರು. ಅರಾಜಕತೆಯಿಂದ ಜಗತ್ತೆಲ್ಲವೂ ಉಪದ್ರವಗಳಿಂದ ತುಂಬಿಕೊಂಡಿತು. “ಯಾರು ನಮ್ಮ ರಾಜನಾಗುತ್ತಾನೆ?” ಎಂದು ದೇವತೆಗಳು ಭಯಭೀತರಾದರು. ದಿವಿಯಲ್ಲಿ ದೇವರಾಜನಿಲ್ಲದೇ ಆದಾಗ ದೇವತೆಗಳು ಮತ್ತು ಋಷಿಗಳಲ್ಲಿ ಯಾರೂ ದೇವತೆಗಳ ರಾಜನಾಗಲು ಮನಸ್ಸುಮಾಡಲಿಲ್ಲ. ಆಗ ಎಲ್ಲ ಋಷಿಗಳೂ ತ್ರಿದಶೇಶ್ವರರೂ ದೇವತೆಗಳೂ “ಶ್ರೀಮಾನ್ ನಹುಷನು ದೇವರಾಜನಾಗಿ ಅಭಿಷಿಕ್ತನಾಗಲಿ!” ಎಂದು ಹೇಳಿದರು. ಅವರೆಲ್ಲರೂ ಅವನಲ್ಲಿಗೆ ಹೋಗಿ ಹೇಳಿದರು: “ಪಾರ್ಥಿವ! ನಮ್ಮ ರಾಜನಾಗು!” ತನ್ನ ಹಿತವನ್ನು ಬಯಸಿ ಆ ನಹುಷನು ಪಿತೃಗಳ ಸಹಿತರಿಂದ ದೇವ ಋಷಿಗಣಗಳಿಗೆ ಹೇಳಿದನು: “ನಾನು ದುರ್ಬಲನಾಗಿದ್ದೇನೆ. ನಿಮ್ಮನ್ನು ಪರಿಪಾಲಿಸಲು ನನ್ನಲ್ಲಿ ಶಕ್ತಿಯಿಲ್ಲ. ಬಲಶಾಲಿಯು ರಾಜನಾಗುತ್ತಾನೆ. ಶಕ್ರನು ಯಾವಾಗಲೂ ಬಲಶಾಲಿಯಾಗಿದ್ದನು.” ಋಷಿಗಳನ್ನು ಮುಂದಿಟ್ಟುಕೊಂಡ ಎಲ್ಲ ದೇವತೆಗಳೂ ಅವನಿಗೆ ಪುನಃ ಹೇಳಿದರು: “ನಮ್ಮ ತಪಸ್ಸುಗಳಿಂದ ಯುಕ್ತನಾಗಿ ತ್ರಿವಿಷ್ಟಪದಲ್ಲಿ ರಾಜ್ಯವನ್ನು ಆಳು! ನಮ್ಮ ಪರಸ್ಪರರಲ್ಲಿ ಭಯವಿದೆ ಎನ್ನುವುದು ನಿಃಸಂಶಯ. ರಾಜೇಂದ್ರ! ಅಭಿಷೇಕಿಸಿಕೊಂಡು ತ್ರಿವಿಷ್ಟಪದಲ್ಲಿ ರಾಜನಾಗು. ನಿನ್ನ ಕಣ್ಣಮುಂದೆ ಯಾರೇ ಬರಲಿ – ದೇವ, ದಾನವ, ಯಕ್ಷ, ಋಷಿ, ರಾಕ್ಷಸ, ಪಿತೃ, ಗಂಧರ್ವರು - ಅವರನ್ನು ನೋಡಿಯೇ ಅವರ ತೇಜಸ್ಸನ್ನು ಎಳೆದುಕೊಂಡು ಬಲಶಾಲಿಯಾಗುತ್ತೀಯೆ. ಸದಾ ಧರ್ಮವನ್ನೇ ಮೊದಲಾಗಿರಿಸಿಕೊಂಡು ಸರ್ವ ಲೋಕಗಳ ಅಧಿಪತಿಯಾಗು. ತ್ರಿವಿಷ್ಟಪದಲ್ಲಿ ಬ್ರಹ್ಮರ್ಷಿಗಳನ್ನು ಮತ್ತು ದೇವತೆಗಳನ್ನು ರಕ್ಷಿಸು.”

ಸತತ ಧರ್ಮಾತ್ಮನಾಗಿದ್ದರೂ, ತ್ರಿವಿಷ್ಟಪದಲ್ಲಿ ರಾಜ್ಯವನ್ನು ಪಡೆದು, ಸುದುರ್ಲಭ ವರವನ್ನು ಪಡೆದು ಅವನು ಕಾಮಾತ್ಮನಾಗತೊಡಗಿದನು. ಆಗ ದೇವರಾಜ ನಹುಷನು ಎಲ್ಲ ದೇವೋದ್ಯಾನಗಳಲ್ಲಿ, ನಂದನ ಉಪವನದಲ್ಲಿ, ಕೈಲಾಸ ಹಿಮಾಲಯದ ತಪ್ಪಲಿನಲ್ಲಿ, ಮಂದರ ಶ್ವೇತ ಪರ್ವತಗಳಲ್ಲಿ, ಸಹ್ಯಾದ್ರಿ-ಮಹೇಂದ್ರ ಮಲಯಗಳಲ್ಲಿ, ಸಮುದ್ರ ಸರೋವರಗಳಲ್ಲಿ, ಅಪ್ಸರೆಯರು ಮತ್ತು ದೇವ ಕನ್ಯೆಯರಿಂದ ಸಮಾವೃತನಾಗಿ ಬಹುವಿಧದ ಕ್ರೀಡೆಗಳಲ್ಲಿ ತೊಡಗಿದನು. ಬಹುವಿಧದ ದಿವ್ಯ ಕಥೆಗಳನ್ನೂ, ಶ್ರುತಿಮನೋಹರ ವಾದ್ಯಗಳೆಲ್ಲವನ್ನೂ, ಮಧುರಸ್ವರ ಗೀತೆಗಳನ್ನೂ ಕೇಳಿದನು. ವಿಶ್ವಾವಸು, ನಾರದ, ಗಂಧರ್ವ ಅಪ್ಸರ ಗಣಗಳು, ಮತ್ತು ಆರು ಋತುಗಳು ಮೂರ್ತಿಮಂತರಾಗಿ ದೇವೇಂದ್ರನ ಉಪಸ್ಥಿತಿಯಲ್ಲಿದ್ದರು. ಸುಗಂಧಗಳನ್ನು ಹೊತ್ತು ಮಾರುತನು ಮನೋಜ್ಞ ಸುಖಶೀತಲವಾಗಿ ಬೀಸಿದನು. ಹೀಗೆ ಮಹಾತ್ಮ ನಹುಷನು ಕ್ರೀಡಿಸುತ್ತಿರಲು, ಅವನಿಗೆ ಶಕ್ರನ ಪ್ರಿಯ ಮಹಿಷಿ ದೇವಿಯ ದರ್ಶನವು ದೊರಕಿತು. ಅವಳನ್ನು ನೋಡಿದ ಆ ದುಷ್ಟಾತ್ಮನು ಸಭಾಸದರೆಲ್ಲರಲ್ಲಿ ಕೇಳಿದನು: “ಇಂದ್ರನ ಮಹಿಷಿ ದೇವಿಯು ಏಕೆ ನನ್ನೊಂದಿಗೆ ಕುಳಿತುಕೊಳ್ಳುವುದಿಲ್ಲ? ನಾನು ದೇವತೆಗಳ ಇಂದ್ರ ಮತ್ತು ಹಾಗೆಯೇ ಲೋಕಗಳ ಈಶ್ವರ. ಬೇಗನೆ ಶಚಿಯು ಇಂದು ನನ್ನ ಮನೆಗೆ ಬರಲಿ!”

ಅದನ್ನು ಕೇಳಿ ದುಃಖಿತಳಾದ ದೇವಿಯು ಬೃಹಸ್ಪತಿಗೆ ಹೇಳಿದಳು: “ಬ್ರಹ್ಮನ್! ನನ್ನನ್ನು ನಹುಷನಿಂದ ರಕ್ಷಿಸು! ನಿನ್ನ ಶರಣು ಬಂದಿದ್ದೇನೆ! ನಾನು ಸರ್ವಲಕ್ಷಣಸಂಪನ್ನಳು. ದೇವರಾಜನ ಪ್ರಿಯಳು. ಅತ್ಯಂತ ಸುಖಭಾಗಿನಿ. ಅವೈಧವ್ಯದಿಂದ ಸಂಯುಕ್ತಳಾಗಿದ್ದೇನೆ. ಏಕಪತ್ನಿಯಾಗಿ ಪತಿವ್ರತೆಯಾಗಿದ್ದೇನೆ ಎಂದು ನನಗೆ ನೀನು ಯಾವಾಗಲೂ ಹೇಳುತ್ತೀಯೆ ಮತ್ತು ಹಿಂದೆ ಹೇಳಿದ್ದೀಯೆ. ನಿನ್ನ ಮಾತು ಸುಳ್ಳಾಗದಂತೆ ಮಾಡು! ಹಿಂದೆ ನೀನು ಸುಳ್ಳನ್ನು ಎಂದೂ ಹೇಳಿದ್ದಿಲ್ಲ. ಆದುದರಿಂದ ನೀನು ಹೇಳಿದ ಇದನ್ನೂ ಸತ್ಯವನ್ನಾಗಿಸಬೇಕು.”

ಆಗ ಭಯಮೋಹಿತ ಇಂದ್ರಾಣಿಗೆ ಬೃಹಸ್ಪತಿಯು ಹೇಳಿದನು: “ದೇವಿ! ನಾನು ಏನನ್ನು ಹೇಳುತ್ತೇನೋ ಅದು ಸತ್ಯವಾಗುವುದು ಖಂಡಿತ. ದೇವರಾಜ ಇಂದ್ರನು ಶೀಘ್ರದಲ್ಲಿಯೇ ಇಲ್ಲಿಗೆ ಬರುವುದನ್ನು ನೋಡುತ್ತೀಯೆ. ನಹುಷನಿಂದ ನಿನಗೆ ಯಾವುದೂ ಭಯವಿಲ್ಲ. ಸತ್ಯವನ್ನು ಹೇಳುತ್ತಿದ್ದೇನೆ. ಸ್ವಲ್ಪವೇ ಸಮಯದಲ್ಲಿ ನಾನು ನಿನ್ನನ್ನು ಶಕ್ರನೊಂದಿಗೆ ಕೂಡಿಸುತ್ತೇನೆ.”

ಇಂದ್ರಾಣಿಯು ಆಂಗಿರಸ ಬೃಹಸ್ಪತಿಯ ಶರಣು ಹೋಗಿದ್ದಾಳೆ ಎಂದು ಕೇಳಿದ ನೃಪ ನಹುಷನು ಕ್ರೋಧಿತನಾದನು. ನಹುಷನು ಸಿಟ್ಟಾಗಿದ್ದಾನೆಂದು ತಿಳಿದ ದೇವತೆಗಳು ಋಷಿಗಳನ್ನು ಮುಂದಿಟ್ಟುಕೊಂಡು ಘೋರವಾಗಿ ಕಾಣುತ್ತಿದ್ದ ದೇವರಾಜ ನಹುಷನಿಗೆ ಹೇಳಿದರು: “ದೇವರಾಜ! ಕ್ರೋಧವನ್ನು ತ್ಯಜಿಸು. ನಿನ್ನ ಸಿಟ್ಟಿನಿಂದ ಅಸುರ, ಗಂಧರ್ವ, ಮಹೋರಗಗಳೊಂದಿಗೆ ಜಗತ್ತೇ ಕಂಪಿಸುತ್ತಿದೆ. ಈ ಕ್ರೋಧವನ್ನು ಬಿಡು. ನಿನ್ನಂಥಹ ಸಾಧುಗಳು ಸಿಟ್ಟಾಗುವುದಿಲ್ಲ. ಆ ದೇವಿಯು ಪರನ ಪತ್ನಿ. ಪ್ರಸೀದನಾಗು. ಇನ್ನೊಬ್ಬನ ಪತ್ನಿಯನ್ನು ಆಸೆಪಡುವ ಈ ಪಾಪದಿಂದ ನಿನ್ನ ಮನಸ್ಸನ್ನು ಹಿಂದೆ ತೆಗೆದುಕೋ. ನಿನಗೆ ಮಂಗಳವಾಗಲಿ! ದೇವರಾಜನಾಗಿದ್ದೀಯೆ. ಪ್ರಜೆಗಳನ್ನು ಧರ್ಮದಿಂದ ಪಾಲಿಸು!”

ಹೇಳಿದ ಈ ಮಾತುಗಳು ಕಾಮಮೋಹಿತನಾದ ಅವನಿಗೆ ಹಿಡಿಸಲಿಲ್ಲ. ಆಗ ಸುರಾಧಿಪನು ಇಂದ್ರನ ಕುರಿತಾಗಿ ದೇವತೆಗಳಿಗೆ ಹೀಗೆ ಹೇಳಿದನು: “ಹಿಂದೆ ಋಷಿಪತ್ನೀ ಯಶಸ್ವಿನೀ ಅಹಲ್ಯೆಯನ್ನು ಅವಳ ಪತಿಯು ಜೀವಿಸಿರುವಾಗಲೇ ಅವನು ಬಲಾತ್ಕರಿಸಿದ್ದನು. ಆಗ ನೀವು ಅವನನ್ನು ಏಕೆ ತಡೆಯಲಿಲ್ಲ? ಹಿಂದೆ ಇಂದ್ರನು ಬಹಳಷ್ಟು ಧರ್ಮಕ್ಕೆ ವಿರುದ್ಧವಾದ ಮೋಸದ, ಒಳ್ಳೆಯದಲ್ಲದ ಕೃತ್ಯಗಳನ್ನು ಮಾಡಿದ್ದಾನೆ. ಆಗ ಅವನನ್ನು ಏಕೆ ತಡೆಯಲಿಲ್ಲ? ದೇವಿಯು ನನ್ನ ಬಳಿ ಬರಲಿ. ಅವಳಿಗೆ ಇದೇ ಪರಮ ಹಿತವಾದುದು. ದೇವತೆಗಳೇ! ಇದು ನಿಮಗೂ ಕೂಡ ಮಂಗಳಕರವಾಗುತ್ತದೆ!”

ದೇವತೆಗಳು ಹೇಳಿದರು: “ದಿವಸ್ಪತೇ! ನೀನು ಇಚ್ಛಿಸಿದಂತೆ ಇಂದ್ರಾಣಿಯನ್ನು ಕರೆತರುತ್ತೇವೆ. ಈ ಕ್ರೋಧವನ್ನು ಬಿಡು. ಪ್ರೀತನಾಗು!”

ಹೀಗೆ ಹೇಳಿ ದೇವತೆಗಳು ಋಷಿಗಳೊಂದಿಗೆ ಇಂದ್ರಾಣಿಗೆ ಅಶುಭವಾದ ಮಾತುಗಳನ್ನು ಹೇಳಲು ಬೃಹಸ್ಪತಿಯಲ್ಲಿಗೆ ಹೋದರು. “ವಿಪ್ರೇಂದ್ರ! ಇಂದ್ರಾಣಿಯು ನಿನ್ನ ಮನೆಯಲ್ಲಿ ಶರಣು ಬಂದಿದ್ದಾಳೆಂದೂ ನೀನು ಅವಳಿಗೆ ಅಭಯವನ್ನಿತ್ತಿದ್ದೀಯೆ ಎಂದೂ ತಿಳಿದಿದ್ದೇವೆ. ಆದರೆ ಗಂಧರ್ವ ಋಷಿಗಳೊಂದಿಗೆ ನಾವು ದೇವತೆಗಳು ನಹುಷನಿಗಾಗಿ ಇಂದ್ರಾಣಿಯನ್ನು ಬಿಟ್ಟುಕೊಡಲು ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ. ಮಹಾದ್ಯುತಿ ದೇವರಾಜ ನಹುಷನು ಇಂದ್ರನಿಗಿಂತಲೂ ವಿಶಿಷ್ಟನು. ವರವರ್ಣಿನೀ ವರಾರೋಹೆಯು ಅವನನ್ನು ಪತಿಯನ್ನಾಗಿ ವರಿಸಲಿ.”

ಇದನ್ನು ಕೇಳಿದ ಆ ದೇವಿಯು ಕಣ್ಣೀರು ಸುರಿಸಿ ಜೋರಾಗಿ ರೋದಿಸುತ್ತಾ ದೀನಳಾಗಿ ಬೃಹಸ್ಪತಿಗೆ ಹೇಳಿದಳು: “ಬ್ರಹ್ಮನ್! ಪ್ರಭು ನಹುಷನನ್ನು ನನ್ನ ಪತಿಯನ್ನಾಗಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನಿನ್ನ ಶರಣು ಬಂದಿದ್ದೇನೆ. ಈ ಮಹಾಭಯದಿಂದ ನನ್ನನ್ನು ಪಾರುಮಾಡು!”

ಬೃಹಸ್ಪತಿಯು ಹೇಳಿದನು: “ಇಂದ್ರಾಣಿ! ಶರಣಾಗತರನ್ನು ತ್ಯಜಿಸುವುದಿಲ್ಲ. ಇದು ನನ್ನ ನಿಶ್ಚಯ. ಧರ್ಮಜ್ಞೆ ಧರ್ಮಶೀಲೆ ನಿನ್ನನ್ನು ನಾನು ತ್ಯಜಿಸುವುದಿಲ್ಲ. ಅದರಲ್ಲೂ ಬ್ರಾಹ್ಮಣನಾಗಿರುವ, ಧರ್ಮವನ್ನು ಕೇಳಿ ತಿಳಿದುಕೊಂಡಿರುವ, ಸತ್ಯಶೀಲನಾಗಿರುವ, ಧರ್ಮದ ಅನುಶಾಸನವನ್ನು ತಿಳಿದಿರುವ ನಾನು ಅಕಾರ್ಯವನ್ನು ಮಾಡಲು ಬಯಸುವುದಿಲ್ಲ. ಸುರೋತ್ತಮರೇ! ನಾನು ಇದನ್ನು ಮಾಡುವುದಿಲ್ಲ! ಹೊರಟು ಹೋಗಿ! ಇದರ ಕುರಿತು ಹಿಂದಿನ ಬ್ರಹ್ಮನ ಈ ಗೀತೆಯನ್ನು ಕೇಳಬೇಕು. ಭೀತರಾಗಿ ಶರಣು ಬಂದಿರುವವರನ್ನು ಶತ್ರುಗಳಿಗೆ ಕೊಡುವವನು ತನಗೇ ಬೇಕೆಂದಾಗ ರಕ್ಷಣೆಯನ್ನು ಪಡೆಯುವುದಿಲ್ಲ. ಅವನ ಬೀಜವು ಬೀಜಕಾಲದಲ್ಲಿ ಬೆಳೆಯುವುದಿಲ್ಲ. ಮತ್ತು ಅಂಥಹವನಲ್ಲಿ ಮಳೆಗಾಲದಲ್ಲಿಯೂ ಮಳೆಯು ಬೀಳುವುದಿಲ್ಲ. ಭೀತರಾಗಿ ಶರಣು ಬಂದಿರುವವರನ್ನು ಬಿಟ್ಟುಕೊಡುವವನ ಹವಿಸ್ಸನ್ನು ದೇವತೆಗಳು ಸ್ವೀಕರಿಸುವುದಿಲ್ಲ. ಅವನು ಹಿಡಿಯುವ ಯಾವುದೂ ಯಶಸ್ವಿಯಾಗುವುದಿಲ್ಲ. ಚೇಷ್ಟೆಗಳನ್ನು ಕಳೆದುಕೊಂಡು ಅವನು ಸ್ವರ್ಗಲೋಕದಿಂದ ಬೀಳುತ್ತಾನೆ. ಭೀತರಾಗಿ ಶರಣು ಬಂದಿರುವವರನ್ನು ಶತ್ರುಗಳಿಗೆ ಕೊಡುವವನ ಮಕ್ಕಳು ಅಕಾಲದಲ್ಲಿ ಸಾಯುತ್ತಾರೆ. ಅವನ ಪಿತ್ರುಗಳು ಸದಾ ಜಗಳವಾಡುತ್ತಾರೆ. ಇಂದ್ರನೊಂದಿಗೆ ದೇವತೆಗಳು ಅವನ ಮೇಲೆ ವಜ್ರಪ್ರಹಾರ ಮಾಡುತ್ತಾರೆ. ಇದನ್ನು ತಿಳಿದ ನಾನು ಇಂದ್ರಾಣೀ, ಶಕ್ರನ ಪ್ರಿಯ ಮಹಿಷಿಯೆಂದು ಲೋಕಗಳಲ್ಲಿ ವಿಶ್ರುತಳಾದ ಈ ಶಚಿಯನ್ನು ಕೊಡುವುದಿಲ್ಲ. ಇವಳಿಗೆ ಹಿತವಾಗುವ ನನಗೂ ಹಿತವಾಗುವ ಕಾರ್ಯವನ್ನು ಮಾಡಿ. ಶಚಿಯನ್ನು ನಾನು ಕೊಡುವುದೇ ಇಲ್ಲ!”

ಆಗ ದೇವತೆಗಳು ಅಂಗಿರಸರಲ್ಲಿ ಶ್ರೇಷ್ಠ ಗುರುವಿಗೆ ಹೇಳಿದರು: “ಬೃಹಸ್ಪತೇ! ಹೇಗೆ ಒಳಿತನ್ನು ತರಬಹುದು ಎಂದು ನೀನೇ ಆಲೋಚಿಸು.”

ಬೃಹಸ್ಪತಿಯು ಹೇಳಿದನು: “ಈ ಶುಭೆ ದೇವಿ ಇಂದ್ರಾಣಿಯು ನಹುಷನಲ್ಲಿ ಕೆಲವೇ ಸಮಯವನ್ನು ಯಾಚಿಸಲಿ. ಇದರಿಂದ ಇಂದ್ರಾಣಿಗೂ ನಮಗೂ ಹಿತವಾಗುತ್ತದೆ. ಕಾಲವು ಬಹಳಷ್ಟು ವಿಘ್ನಗಳನ್ನುಂಟುಮಾಡುತ್ತದೆ. ಕಾಲವು ಕಾಲವನ್ನು ತಳ್ಳುತ್ತದೆ. ಬಲವಾನ್ ನಹುಷನು ವರವನ್ನಾಶ್ರಯಿಸಿ ದರ್ಪಿತನಾಗಿದ್ದಾನೆ.”

ಅವನು ಹಾಗೆ ಹೇಳಲು ಪ್ರೀತರಾದ ದೇವತೆಗಳು ಅವನಿಗೆ ಹೇಳಿದರು: “ಬ್ರಹ್ಮನ್! ಒಳ್ಳೆಯದನ್ನೇ ಹೇಳಿದ್ದೀಯೆ. ಇದು ಎಲ್ಲ ದಿವೌಕಸರಿಗೂ ಹಿತವಾದುದು. ಇದು ಹೀಗೆಯೇ ಆಗಲಿ. ಈ ದೇವಿಯನ್ನು ಸಂತವಿಸು.”

ಆಗ ಅಗ್ನಿಯನ್ನು ಮುಂದಿಟ್ಟುಕೊಂಡು ಸಮಸ್ತ ದೇವತೆಗಳೂ ಲೋಕಗಳ ಹಿತವನ್ನು ಬಯಸಿ ಇಂದ್ರಾಣಿಗೆ ಮೆಲ್ಲನೆ ಹೇಳಿದರು: “ಸ್ಥಾವರ-ಜಂಗಮಗಳ ಈ ಜಗತ್ತನ್ನು ನೀನು ಪೊರೆಯುತ್ತಿರುವೆ. ನೀನು ಪತಿವ್ರತೆ ಮುತ್ತು ಸತ್ಯೆ. ನಹುಷನಲ್ಲಿಗೆ ಹೋಗು. ನಿನ್ನನ್ನು ಅಭಿಕಾಮಿಸುವ ಆ ಪಾರ್ಥಿವ ನಹುಷನು ಬೇಗನೇ ವಿನಾಶಗೊಳ್ಳುತ್ತಾನೆ. ದೇವೀ! ಶಕ್ರನು ಸುರೈಶ್ವರ್ಯವನ್ನು ಪುನಃ ಪಡೆಯುತ್ತಾನೆ.”

ಈ ರೀತಿಯ ನಿಶ್ಚಯ ಮಾಡಿಕೊಂಡು ಇಂದ್ರಾಣಿಯು ಕಾರ್ಯಸಿದ್ಧಿಗಾಗಿ ನಾಚಿಕೊಂಡವಳಂತೆ ಘೋರದರ್ಶನ ನಹುಷನಲ್ಲಿಗೆ ಹೋದಳು. ಕಾಮದಿಂದ ಚೇತನವನ್ನು ಕಳೆದುಕೊಂಡ ಆ ದುಷ್ಟಾತ್ಮ ನಹುಷನಾದರೋ ವಯೋರೂಪಸಮನ್ವಿತಳಾದ ಅವಳನ್ನು ಕಂಡು ಸಂತೋಷಭರಿತನಾದನು. ಅವಳನ್ನು ನೋಡಿ ದೇವರಾಜ ನಹುಷನು ಹೇಳಿದನು: “ಶುಚಿಸ್ಮಿತೇ! ನಾನು ಮೂರೂ ಲೋಕಗಳ ಇಂದ್ರ. ನನ್ನನ್ನು ನಿನ್ನ ಪತಿಯಾಗಿ ಪ್ರೀತಿಸು!”

ನಹುಷನು ಹೀಗೆ ಹೇಳಲು ಆ ಪತಿವ್ರತೆ ದೇವಿಯು ಭಯೋದ್ವಿಗ್ನಳಾಗಿ ಭಿರುಗಾಳಿಗೆ ಸಿಲುಕಿದ ಬಾಳೆಯ ಮರದಂತೆ ತತ್ತರಿಸಿದಳು. ಅವಳಾದರೋ ಬ್ರಹ್ಮನಿಗೆ ಕೈಮುಗಿದು ತಲೆಬಾಗಿ ನಮಸ್ಕರಿಸಿ ಘೋರದರ್ಶನ ದೇವರಾಜ ನಹುಷನಿಗೆ ಹೇಳಿದಳು: “ಸುರೇಶ್ವರ! ಸ್ವಲ್ಪ ಸಮಯವನ್ನು ಬಯಸುತ್ತೇನೆ. ಶಕ್ರನಿಗೆ ಏನಾಯಿತೆಂದೂ ಎಲ್ಲಿ ಹೋಗಿದ್ದಾನೆಂದೂ ತಿಳಿಯದಾಗಿದೆ. ಸತ್ಯವೇನೆಂದು ತಿಳಿಯಲು ಪ್ರಯತ್ನಿಸುತ್ತೇನೆ. ಅವನ ಕುರಿತಾದ ವಿಷಯವು ತಿಳಿಯದೇ ಹೋದಲ್ಲಿ ನಾನು ನಿನ್ನ ಉಪಸ್ಥಿತಿಯಲ್ಲಿ ಬರುತ್ತೇನೆ. ಸತ್ಯವನ್ನು ನಿನಗೆ ಹೇಳುತ್ತೇನೆ.”

ಇಂದ್ರಾಣಿಯು ಹೀಗೆ ಹೇಳಲು ನಹುಷನು ಸಂತೋಷಗೊಂಡು ಹೇಳಿದನು: “ಸುಶ್ರೋಣೀ! ನೀನು ನನಗೆ ಹೇಳಿದಂತೆಯೇ ಆಗಲಿ. ವಿಷಯವನ್ನು ತಿಳಿದುಕೊಂಡು ಬರುತ್ತೀಯೆ. ನೀನು ನುಡಿದ ಸತ್ಯವು ನಿನಗೆ ನೆನಪಿರಲಿ.”

ನಹುಷನಿಂದ ಕಳುಹಿಸಲ್ಪಟ್ಟ ಆ ತಪಸ್ವಿನೀ ಶುಭೆಯು ಹೊರಬಂದು ಬೃಹಸ್ಪತಿಯ ಮನೆಗೆ ಹೋದಳು. ಅವಳ ಮಾತನ್ನು ಕೇಳಿ, ಅಗ್ನಿಯ ನೇತೃತ್ವದಲ್ಲಿ ದೇವತೆಗಳು ಶಕ್ರನ ಒಳಿತನ್ನೇ ಉದ್ದೇಶವನ್ನಾಗಿಟ್ಟುಕೊಂಡು ಮಂತ್ರಾಲೋಚನೆಗೈದರು. ಪ್ರಭವಿಷ್ಣು ದೇವದೇವ ವಿಷ್ಣುವಿನ ಬಳಿಸಾರಿ, ಆ ವಾಕ್ಯವಿಶಾರದರು ಅವನಿಗೆ ಉದ್ವಿಗ್ನರಾಗಿ ಈ ಮಾತನ್ನಾಡಿದರು: “ಸುರಗಣೇಶ್ವರ ಶಕ್ರನು ಬ್ರಹ್ಮಹತ್ಯೆಯಿಂದ ಅಭಿಭೂತನಾಗಿದ್ದಾನೆ. ದೇವೇಶ! ನೀನೇ ನಮ್ಮ ಗತಿ. ಸರ್ವಭೂತರ ರಕ್ಷಣಾರ್ಥವಾಗಿಯೇ ನೀನು ವಿಷ್ಣುತ್ವವನ್ನು ಧರಿಸಿದ್ದೀಯೆ. ನಿನ್ನ ವೀರ್ಯದಿಂದ ವೃತ್ರನು ನಿಹತನಾಗಲು ವಾಸವನು ಬ್ರಹ್ಮಹತ್ಯೆಯಿಂದ ಆವೃತನಾಗಿದ್ದಾನೆ. ಅವನಿಗೆ ಮೋಕ್ಷವೇನೆಂದು ನಿರ್ದೇಶಿಸು.”

ದೇವತೆಗಳ ಆ ಮಾತನ್ನು ಕೇಳಿ ವಿಷ್ಣುವು ಹೇಳಿದನು: “ಶಕ್ರನು ನನ್ನನ್ನೇ ಯಾಜಿಸಲಿ. ನಾನು ವಜ್ರಿಣಿಯನ್ನು ಪಾವನಗೊಳಿಸುತ್ತೇನೆ. ಪುಣ್ಯ ಹಯಮೇಧದಿಂದ ನನ್ನನ್ನು ಇಷ್ಟಗೊಳಿಸಿ, ಪಾಕಶಾಸನನು, ಭಯವನ್ನು ಕಳೆದುಕೊಂಡು, ಪುನಃ ದೇವತೆಗಳ ಇಂದ್ರತ್ವವನ್ನು ಪಡೆಯುತ್ತಾನೆ. ತನ್ನದೇ ಕರ್ಮದಿಂದ ದುರ್ಮತಿ ನಹುಷನು ನಾಶಹೊಂದುತ್ತಾನೆ. ದೇವತೆಗಳೇ! ಕೆಲವು ಕಾಲ ನೀವು ತಾಳ್ಮೆಯಿಂದಿರಬೇಕು. ಜಾಗರೂಕರಾಗಿಯೂ ಇರಬೇಕು.”

ವಿಷ್ಣುವಿನ ಆ ಶುಭ ಸತ್ಯ ಅಮೃತೋಪಮ ಮಾತನ್ನು ಕೇಳಿ ಸುರಗಣಗಳೆಲ್ಲರೂ ಆಚಾರ್ಯ ಮತ್ತು ಋಷಿಗಳ ಜೊತೆಗೂಡಿ ಭಯೋದ್ವಿಗ್ನ ಶಕ್ರನಿದ್ದಲ್ಲಿಗೆ ಹೊರಟರು. ಅಲ್ಲಿ ಮಹಾತ್ಮ ಮಹೇಂದ್ರನ ಬ್ರಹ್ಮಹತ್ಯಾದೋಷವನ್ನು ಕಳೆದು ಪಾವನಗೊಳಿಸಲು ಸುಮಹಾ ಅಶ್ವಮೇಧವನ್ನು ನೆರವೇರಿದರು. ಬ್ರಹ್ಮಹತ್ಯಾದೋಷವನ್ನು ಮರಗಳಲ್ಲಿ, ನದಿಗಳಲ್ಲಿ, ಪರ್ವತಗಳಲ್ಲಿ, ಭೂಮಿ ಮತ್ತು ಸ್ತ್ರೀಯರಲ್ಲಿ ವಿಭಜಿಸಿದರು. ಆ ಭೂತಗಳಲ್ಲಿ ಅದನ್ನು ಭಾಗಮಾಡಿ ವಿಸರ್ಜಿಸಿದ ನಂತರ ಸುರೇಶ್ವರ ವಾಸವನು ಜ್ವರವನ್ನು ಹೋಗಲಾಡಿಸಿಕೊಂಡು ಪಾಪದಿಂದ ಪಾವನನಾಗಿ, ಆತ್ಮವಂತನಾದನು. ತನ್ನ ಸ್ಥಾನದಲ್ಲಿದ್ದು ಸರ್ವಭೂತಗಳಿಗೆ ವರದನಾಗಿದ್ದ ಆ ದುಃಸಹ ನಹುಷನನ್ನು ನೋಡಿ ಬಲಸೂದನನು ನಡುಗಿ ತೇಜಸ್ಸನ್ನು ಕಳೆದುಕೊಂಡನು. ಆಗ ವೀರ ಶಚೀಪತಿಯು ಪುನಃ ನಶಿಸಿಹೋಗಿ, ಸರ್ವಭೂತಗಳಿಗೂ ಅದೃಶ್ಯನಾಗಿ, ಸಮಯವನ್ನು ಕಾಯುತ್ತಾ ಸಂಚರಿಸತೊಡಗಿದನು.

ಶಕ್ರನು ನಷ್ಟನಾಗಲು ಶೋಕಸಮನ್ವಿತಳಾದ, ತುಂಬಾ ದುಃಖಿತಳಾದ ಶಚೀದೇವಿಯು ವಿಲಪಿಸಿದಳು. “ಹಾ ಶಕ್ರ! ನಾನು ದಾನವನ್ನು ಮಾಡಿದ್ದರೆ, ಆಹುತಿಯನ್ನು ನೀಡಿದ್ದರೆ, ಗುರುಗಳನ್ನು ಸ್ತುತಿಸಿದ್ದರೆ, ಮತ್ತು ಸತ್ಯವು ಇದ್ದರೆ ನನಗೆ ಒಬ್ಬನೇ ಪತಿಯೆಂದಾಗಲಿ! ನನ್ನ ಮನೋರಥವು ಸಿದ್ಧಿಯಾಗಲೆಂದು ನಾನು ಪುಣ್ಯೆ, ದಿವ್ಯೆ, ಉತ್ತರಾಯಣಕ್ಕೆ ಹೋಗುತ್ತಿರುವ ದೇವಿ ರಾತ್ರಿಯನ್ನು ನಮಸ್ಕರಿಸುತ್ತೇನೆ.”

ಹೀಗೆ ಹೇಳಿ ಅವಳು ಅಲ್ಲಿ ದೇವಿ ನಿಶೆಯ ಉಪಾಸನೆಯನ್ನು ಮಾಡಿದಳು. ಪಾತಿವ್ರತ್ಯ ಮತ್ತು ಸತ್ಯದಿಂದ ಅವಳು ಉಪಶ್ರುತಿಯನ್ನು ನಡೆಸಿದಳು. “ದೇವರಾಜನು ಎಲ್ಲಿದ್ದಾನೋ ಆ ಪ್ರದೇಶವನ್ನು ನನಗೆ ತೋರಿಸು!” ಎಂದು ಉಪಶ್ರುತಿಗೆ ಹೇಳಲು ಆ ದೇವಿಯು ಸತ್ಯವನ್ನು ಸತ್ಯವಾಗಿಯೇ ಕಾಣಿಸಿದಳು. ಆಗ ದೇವೀ ಉಪಶ್ರುತಿಯು ಸಾಧ್ವೀ ರೂಪಿಣಿ ವಯೋರೂಪಸಂಪನ್ನೆಯನ್ನು ನೋಡಿ ಅವಳ ಉಪಸ್ಥಿತಿಯಲ್ಲಿ ಬಂದಳು. ಸಂತೋಷಗೊಂಡ ಇಂದ್ರಾಣಿಯು ಅವಳನ್ನು ಪೂಜಿಸಿ ಹೇಳಿದಳು: “ವರಾನನೇ! ನೀನು ಯಾರೆಂದು ತಿಳಿಯಲು ಇಚ್ಛಿಸುತ್ತೇನೆ. ಹೇಳು.”

ಉಪಶ್ರುತಿಯು ಹೇಳಿದಳು: “ದೇವಿ! ನಿನ್ನ ಬಳಿ ಬಂದಿರುವ ನಾನು ಉಪಶ್ರುತಿ. ಸತ್ಯನಿರತಳಾದ ನಿನಗೆ ದರ್ಶನವನ್ನಿತ್ತಿದ್ದೇನೆ. ಯಮ-ನಿಯಮಗಳಿಂದ ಯುಕ್ತಳಾಗಿ ಪತಿವ್ರತೆಯಾಗಿದ್ದೀಯೆ. ನಿನಗೆ ವೃತ್ರನಿಷೂದನ ದೇವ ಶಕ್ರನನ್ನು ತೋರಿಸುತ್ತೇನೆ. ನಿನಗೆ ಮಂಗಳವಾಗಲಿ! ಬೇಗನೆ ನನ್ನನ್ನು ಹಿಂಬಾಲಿಸಿ ಬಾ. ಸುರಸತ್ತಮನನ್ನು ನೋಡುವಿಯಂತೆ.”

ಆಗ ಅವಳು ಹೊರಡಲು, ದೇವೀ ಇಂದ್ರಾಣಿಯು ಅವಳನ್ನು ಅನುಸರಿಸಿದಳು. ಅವಳು ದೇವಾರಣ್ಯವನ್ನೂ ಬಹಳಷ್ಟು ಪರ್ವತಗಳನ್ನೂ ದಾಟಿ ಹಿಮವಂತವನ್ನು ಅತಿಕ್ರಮಿಸಿ ಉತ್ತರದ ಕಡೆ ಬಂದಳು. ಸಮುದ್ರವನ್ನೂ ತಲುಪಿ ಅಲ್ಲಿ ಬಹುಯೋಜನ ವಿಸ್ತಾರವಾದ ನಾನಾ ದ್ರುಮಲತೆಗಳಿಂದ ತುಂಬಿದ್ದ ಮಹಾದ್ವೀಪವನ್ನು ತಲುಪಿದರು. ನಾನಾ ಪಕ್ಷಿಗಳಿಂದ ತುಂಬಿದ್ದ ಶತಯೋಜನ ವಿಸ್ತೀರ್ಣದ ಅಷ್ಟೇ ಅಗಲವಾಗಿದ್ದ ದಿವ್ಯ ಶುಭ ಸರೋವರವನ್ನು ಕಂಡರು. ಐದು ಬಣ್ಣಗಳ, ಅರಳಿದ, ಸಾವಿರಾರು ದಿವ್ಯ ಪದ್ಮಗಳು, ದುಂಬಿಗಳ ಗೀತೆಗಳೊಂದಿಗೆ ಇದ್ದವು. ಪದ್ಮದ ನಾಲವನ್ನು ಸೀಳಿ ಅವಳೊಂದಿಗೆ ಪ್ರವೇಶಿಸಿದಳು ಮತ್ತು ಅಲ್ಲಿ ತಂತುವಿನಲ್ಲಿ ಅಡಗಿದ್ದ ಶತಕ್ರತುವನ್ನು ನೋಡಿದಳು. ಅತಿ ಸೂಕ್ಷ್ಮ ರೂಪಾವಸ್ಥೆಯಲ್ಲಿದ್ದ ಪ್ರಭುವನ್ನು ನೋಡಿ ದೇವಿ ಮತ್ತು ಉಪಶ್ರುತಿಯರು ಸೂಕ್ಷ್ಮರೂಪಗಳನ್ನು ಧರಿಸಿದರು. ಆಗ ಇಂದ್ರಾಣಿಯು ಅವನ ವಿಶೃತ ಪೂರ್ವಕರ್ಮಗಳಿಂದ ಅವನನ್ನು ಸ್ತುತಿಸಿದಳು. ಈ ರೀತಿ ಸ್ತುತಿಸಲ್ಪಡಲು ದೇವ ಪುರಂದರನು ಶಚಿಗೆ ಹೇಳಿದನು: “ಇಲ್ಲಿಗೆ ಏಕೆ ಬಂದಿರುವೆ? ನನ್ನನ್ನು ಹೇಗೆ ಹುಡುಕಿದೆ?” ಆಗ ಅವಳು ನಹುಷನು ಮಾಡಿದುದರ ಕುರಿತು ಹೇಳಿದಳು: “ಶತಕ್ರತೋ! ಮೂರು ಲೋಕಗಳ ಇಂದ್ರತ್ವವನ್ನು ಪಡೆದು ವೀರ್ಯಮದಾನ್ವಿತನೂ ದರ್ಪಭರಿತನೂ ಆಗಿ ಆ ದುಷ್ಟಾತ್ಮನು ನನ್ನನ್ನು ಕೂಡು ಎಂದು ಕ್ರೂರವಾಗಿ ಆಡಿದನು ಮತ್ತು ನನಗೆ ಸಮಯವನ್ನೂ ನಿರ್ದಿಷ್ಟಪಡಿಸಿದ್ದಾನೆ. ನನ್ನನ್ನು ರಕ್ಷಿಸದೇ ಇದ್ದರೆ ಅವನು ನನ್ನನ್ನು ವಶಪಡೆಸಿಕೊಳ್ಳುತ್ತಾನೆ. ಈ ಕಾರಣದಿಂದಲೇ ನಾನು ನಿನ್ನ ಬಳಿ ಬಂದಿದ್ದೇನೆ. ರೌದ್ರನಾದ ಪಾಪನಿಶ್ಚಯ ನಹುಷನನ್ನು ಗೆಲ್ಲು. ನಿನ್ನನ್ನು ತೋರಿಸಿಕೋ! ತೇಜಸ್ಸನ್ನು ತಳೆದು ದೇವರಾಜ್ಯವನ್ನಾಳು!”

ಶಚಿಯು ಹೀಗೆ ಹೇಳಲು ಭಗವಾನನು ಪುನಃ ಹೇಳಿದನು: “ವಿಕ್ರಮದ ಕಾಲವಿದಲ್ಲ. ನಹುಷನು ನನಗಿಂತ ಬಲಶಾಲಿಯು. ಭಾಮಿನೀ! ಋಷಿಗಳ ಹವ್ಯ-ಕವ್ಯಗಳಿಂದ ಅವನು ವರ್ಧಿಸಿದ್ದಾನೆ. ನಾನೊಂದು ಉಪಾಯವನ್ನು ಹೇಳುತ್ತೇನೆ. ನೀನು ಅದನ್ನು ಮಾಡಬೇಕು. ಇದನ್ನು ನೀನು ಗುಪ್ತವಾಗಿ ನೆರವೇರಿಸಬೇಕು. ಇದನ್ನು ಯಾರಿಗೂ ಹೇಳಬಾರದು. ಏಕಾಂತದಲ್ಲಿ ನಹುಷನಲ್ಲಿಗೆ ಹೋಗಿ ಹೇಳು. “ಜಗತ್ಪತೇ! ದಿವ್ಯ ಋಷಿಯಾನದಲ್ಲಿ ನನ್ನಲ್ಲಿಗೆ ಬಾ. ಈ ರೀತಿಯಲ್ಲಿ ನಾನು ನಿನ್ನನ್ನು ಪ್ರೀತಿಸಿ ವಶದಲ್ಲಿ ಬರುತ್ತೇನೆ” ಎಂದು ಹೇಳು.”

ದೇವರಾಜನು ಹೀಗೆ ಹೇಳಲು ಅವನ ಪತ್ನಿ ಕಮಲೇಕ್ಷಣೆಯು “ಹೀಗೆಯೇ ಆಗುತ್ತದೆ” ಎಂದು ಹೇಳಿ ನಹುಷನ ಬಳಿ ಹೋದಳು. ಆಗ ನಹುಷನು ಅವಳನ್ನು ಕಂಡು ವಿಸ್ಮಿತನಾಗಿ ಹೇಳಿದನು: “ವರಾರೋಹೇ! ನಿನಗೆ ಸ್ವಾಗತ! ನಿನಗೆ ಏನು ಮಾಡಲಿ? ಭಕ್ತನಾದ ನನ್ನನ್ನು ಭಜಿಸು. ಏನನ್ನು ಬಯಸುತ್ತೀಯೆ. ಮಾಡುವುದೇನೇ ಇದ್ದರೂ ಅದನ್ನು ಮಾಡುತ್ತೇನೆ. ನಾಚದಿರು! ನನ್ನ ಮೇಲೆ ವಿಶ್ವಾಸವಿಡು. ಸತ್ಯದಲ್ಲಿ ಶಪಥ ಮಾಡಿ ಮಾಡುತ್ತೇನೆ ಎಂದು ವಚನವನ್ನು ನೀಡುತ್ತೇನೆ.”

ಇಂದ್ರಾಣಿಯು ಹೇಳಿದಳು: “ಜಗತ್ಪತೇ! ಬಯಸಿದಂತೆ ನನಗೆ ಸಮಯವನ್ನು ಮಾಡಿಕೊಟ್ಟಿದ್ದೀಯೆ. ಇದರ ನಂತರ ನೀನೇ ನನ್ನ ಪತಿಯಾಗುತ್ತೀಯೆ. ನನ್ನ ಹೃದಯದಲ್ಲಿ ಒಂದು ಬಯಕೆಯಿದೆ. ಚಿತ್ತವಿಟ್ಟು ಕೇಳು. ನನ್ನ ಪ್ರೀತಿಯ ಅದನ್ನು ಮಾಡುವೆಯಾದರೆ ಹೇಳುತ್ತೇನೆ. ಈ ಮಾತನ್ನು ನಡೆಸಿಕೊಟ್ಟರೆ ನಾನು ನಿನ್ನ ವಶದಲ್ಲಿ ಬರುತ್ತೇನೆ. ಇಂದ್ರನು ವಾಹನವಾಗಿ ಕುದುರೆಗಳನ್ನು, ಆನೆಗಳನ್ನು ಮತ್ತು ರಥಗಳನ್ನು ಹೊಂದಿದ್ದನು. ಈ ಮೊದಲು ವಿಷ್ಣುವಿನಲ್ಲಿಯಾಗಲೀ, ರುದ್ರನಲ್ಲಿಯಾಗಲೀ, ಅಸುರರಲ್ಲಿಯಾಗಲೀ ರಾಕ್ಷಸರಲ್ಲಿಯಾಗಲೀ ಇಲ್ಲದೇ ಇರುವ ವಾಹನವು ನಿನ್ನದಾಗಬೇಕೆಂದು ನನಗೆ ಬಯಕೆಯಿದೆ. ಋಷಿಗಳು ಒಟ್ಟಾಗಿ ಎಲ್ಲರೂ ನಿನ್ನನ್ನು ಪಲ್ಲಕ್ಕಿಯಲ್ಲಿ ಹೊರಬೇಕು. ಇದು ನನಗೆ ಇಷ್ಟವಾಗುತ್ತದೆ. ಅಸುರರಲ್ಲಿ ಮತ್ತು ದೇವತೆಗಳಲ್ಲಿ ನಿನ್ನ ಸರಿಸಮನಾದವರು ಯಾರೂ ಇರಬಾರದು. ನಿನ್ನನ್ನು ನೋಡಿದವರೆಲ್ಲರ ತೇಜಸ್ಸನ್ನು ನಿನ್ನದೇ ವೀರ್ಯದಿಂದ ಆಕರ್ಶಿಸಿಕೊಳ್ಳುತ್ತೀಯೆ. ನಿನ್ನನ್ನು ಎದುರಿಸಿ ನಿಲ್ಲುವವನು ಯಾರೂ ಇಲ್ಲ.”

ಹೀಗೆ ಹೇಳಲು ನಹುಷನು ತುಂಬಾ ಹರ್ಷಿತನಾದನು. ಆಗ ಸುರೇಂದ್ರನು ಆ ಅನಿಂದಿತೆಗೆ ಹೇಳಿದನು: “ವರವರ್ಣಿನೀ! ನೀನು ಹೇಳಿದ ಈ ವಾಹನವು ಅಪೂರ್ವವಾದುದು. ನಾನು ನಿನ್ನ ವಶದಲ್ಲಿದ್ದೇನೆ ಎಂದು ತುಂಬಾ ಸಂತೋಷವಾಗುತ್ತಿದೆ. ಮುನಿಗಳನ್ನು ವಾಹನವಾಗಿ ಮಾಡಿಕೊಳ್ಳವನು ಅಲ್ಪವೀರ್ಯನಾಗಿರುವುದಿಲ್ಲ. ನಾನು ತಪಸ್ವಿ, ಬಲವಂತ ಮತ್ತು ಆಗಿದುದರ, ಆಗುತ್ತಿರುವುದರ ಮತ್ತು ಆಗುವುದರ ಪ್ರಭು. ನಾನು ಸಿಟ್ಟಾದರೆ ಜಗತ್ತು ಇರುವುದಿಲ್ಲ. ಎಲ್ಲವೂ ನನ್ನನ್ನು ಆಧರಿಸಿವೆ.  ದೇವ, ದಾನವ, ಗಂಧರ್ವ, ಕಿನ್ನರ, ಉರಗ ರಾಕ್ಷಸರು - ಸರ್ವ ಲೋಕಗಳೂ ಕ್ರುದ್ಧನಾದ ನನ್ನನ್ನು ಎದುರಿಸಲಾರರು. ಯಾರ ಮೇಲೆ ನನ್ನ ಕಣ್ಣನ್ನು ಹಾಯಿಸುತ್ತೇನೋ ಅವರ ತೇಜಸ್ಸನ್ನು ಅಪಹರಿಸುತ್ತೇನೆ. ಆದುದರಿಂದ ನಿನ್ನ ಮಾತಿನಂತೆ ಮಾಡುತ್ತೇನೆ. ಸಂಶಯವಿಲ್ಲ. ಬ್ರಹ್ಮರ್ಷಿಗಳಾದ ಸಪ್ತ ಋಷಿಗಳು ನನ್ನನ್ನು ಹೊರುತ್ತಾರೆ. ನಮ್ಮ ಮಹಾತ್ಮೆ ಮತ್ತು ಅಭಿವೃದ್ಧಿಯನ್ನು ನೋಡು.”

ಹೀಗೆ ಹೇಳಿ ಅವನು ಆ ವರಾನನೆ ದೇವಿಯನ್ನು ಕಳುಹಿಸಿ, ನಿಯಮದಲ್ಲಿರುವ ಋಷಿಗಳನ್ನು ವಿಮಾನಕ್ಕೆ ಹೂಡಿದನು. ಆ ಅಬ್ರಾಹ್ಮಣ್ಯ, ಬಲೋಪೇತ, ವರಮದದಿಂದ ಮತ್ತನಾದ ಕಾಮವೃತ್ತನಾದ ಆ ದುಷ್ಟಾತ್ಮನು ಆ ಋಷಿಗಳನ್ನು ಏರಿದನು. ನಹುಷನಿಂದ ಕಳುಹಿಸಲ್ಪಟ್ಟ ಅವಳು ಬೃಹಸ್ಪತಿಗೆ ಹೇಳಿದಳು: “ನಹುಷನು ನನಗಿಟ್ಟಿದ್ದ ಸಮಯವು ಸ್ವಲ್ಪವೇ ಉಳಿದಿದೆ. ಶೀಘ್ರದಲ್ಲಿಯೇ ಶಕ್ರನನ್ನು ಹುಡುಕಿ ಭಕ್ತರಿಗೆ ದಯೆಯನ್ನು ಮಾಡು.”

ಭಗವಾನ್ ಬೃಹಸ್ಪತಿಯು ಅವಳಿಗೆ ಹೇಳಿದನು: “ಒಳ್ಳೆಯದಾಯಿತು. ದೇವಿ! ದುಷ್ಟಚೇತಸ ನಹುಷನಿಗೆ ನೀನು ಹೆದರಬಾರದು. ಆ ನರಾಧಮನು ಬಹಳ ಕಾಲ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದಿಲ್ಲ. ಆ ಅಧರ್ಮಜ್ಞನು ಮಹರ್ಷಿಗಳನ್ನು ವಾಹನವನ್ನಾಗಿ ಬಳಸುತ್ತಿದ್ದಾನೆಂದರೆ ಹತನಾಗುತ್ತಾನೆ. ಈ ದುರ್ಮತಿಯ ವಿನಾಶಕ್ಕಾಗಿ ಇಷ್ಟಿಯನ್ನು ಮಾಡುತ್ತೇನೆ. ಶಕ್ರನನ್ನೂ ಹುಡುಕುತ್ತೇನೆ. ಹೆದರಬೇಡ! ನಿನಗೆ ಮಂಗಳವಾಗಲಿ!”

ಆಗ ಮಹಾತೇಜಸ್ವಿ ಬೃಹಸ್ಪತಿಯು ದೇವರಾಜನನ್ನು ಪಡೆಯಲು ವಿಧಿವತ್ತಾಗಿ ಅಗ್ನಿಯನ್ನು ಪ್ರಜ್ವಲಿಸಿ ಪರಮ ಹವಿಸ್ಸನ್ನು ಯಜಿಸಿದನು. ಸ್ವಯಂ ದೇವ ಭಗವಾನ್ ಹುತಾಶನನು ಅದ್ಭುತವಾದ ಸ್ತ್ರೀವೇಷವನ್ನು ಮಾಡಿಕೊಂಡು ತಕ್ಷಣ ಅಲ್ಲಿಯೇ ಅಂತರ್ಧಾನನಾದನು. ಅವನು ದಿಕ್ಕುಗಳನ್ನು ಪರ್ವತಗಳನ್ನು ವನಗಳನ್ನು ಪೃಥ್ವಿ ಅಂತರಿಕ್ಷಗಳನ್ನು ಮನೋವೇಗಗತಿಯಲ್ಲಿ ಹೋಗಿ ಹುಡುಕಿದನು. ಕಣ್ಣುರೆಪ್ಪೆ ಬಡಿಯುವಷ್ಟರಲ್ಲಿ ಬೃಹಸ್ಪತಿಯಿದ್ದಲ್ಲಿಗೆ ಹಿಂದಿರುಗಿದನು.

ಅಗ್ನಿಯು ಹೇಳಿದನು: “ಬೃಹಸ್ಪತೇ! ನಾನು ದೇವರಾಜನನ್ನು ಎಲ್ಲಿಯೂ ಕಾಣಲಿಲ್ಲ. ನೀರಿನಲ್ಲಿ ಹುಡುಕುವುದು ಮಾತ್ರ ಉಳಿದಿದೆ. ನೀರನ್ನು ಪ್ರವೇಶಿಸಲು ನನಗೆ ಉತ್ಸಾಹವಿಲ್ಲ. ಅಲ್ಲಿಗೆ ನನಗೆ ದಾರಿಯಿಲ್ಲ. ನಿನಗೆ ಇನ್ನೇನು ಮಾಡಬೇಕು?”

ಅವನಿಗೆ ದೇವಗುರುವು ಹೇಳಿದನು: “ಮಹಾದ್ಯುತೇ! ನೀರನ್ನು ಪ್ರವೇಶಿಸು!”

ಅಗ್ನಿಯು ಹೇಳಿದನು: “ನೀರನ್ನು ಪ್ರವೇಶಿಸಲು ನನಗೆ ಶಕ್ಯವಿಲ್ಲ. ಅಲ್ಲಿ ನಾನು ನಾಶವಾಗುತ್ತೇನೆ. ನಿನ್ನ ಶರಣು ಹೊಗುತ್ತೇನೆ. ನಿನಗೆ ಮಂಗಳವಾಗಲಿ! ನೀರಿನಿಂದ ಅಗ್ನಿಯು ಉದ್ಭವಿಸಿದೆ; ಕಲ್ಲಿನಿಂದ ಲೋಹವು ಹುಟ್ಟಿತು. ಎಲ್ಲೆಡೆಯೂ ಹೋಗಬಲ್ಲ ಅವರ ತೇಜಸ್ಸು ಅವು ಎಲ್ಲಿಂದ ಹುಟ್ಟಿಬಂದವೋ ಅಲ್ಲಿ ಶಮಿಸಿಹೋಗುತ್ತದೆ.”

ಬೃಹಸ್ಪತಿಯು ಹೇಳಿದನು: “ಅಗ್ನೇ! ನೀನು ಎಲ್ಲ ದೇವತೆಗಳ ಬಾಯಿ! ಹವ್ಯಗಳನ್ನು ಕೊಂಡೊಯ್ಯುವವನು. ನೀನು ಸರ್ವಭೂತಗಳ ಅಂತ್ಯ. ಸಾಕ್ಷಿಯಾಗಿ ಗೂಢವಾಗಿ ಸಂಚರಿಸುತ್ತೀಯೆ. ಕವಿಗಳು ನೀನು ಒಬ್ಬನೇ ಎಂದು ಮತ್ತು ಮೂರು ವಿಧಗಳವನೆಂದೂ ಹೇಳುತ್ತಾರೆ. ನೀನು ಹೊರಟುಹೋದರೆ ಈ ಜಗತ್ತು ಸದ್ಯದಲ್ಲಿಯೇ ನಾಶವಾಗುತ್ತದೆ. ನಿನ್ನನ್ನು ನಮಸ್ಕರಿಸಿ ವಿಪ್ರರು ಸ್ವಕರ್ಮಗಳಿಂದ ಗೆದ್ದ ಶಾಶ್ವತ ಗತಿಗಳಿಗೆ ಪತ್ನಿ ಸುತರೊಂದಿಗೆ ಹೋಗುತ್ತಾರೆ. ನೀನೇ ಹವ್ಯವಾಹನ! ನೀನೇ ಪರಮ ಹವಿಸ್ಸು. ಸತ್ರಗಳಲ್ಲಿ ನಿನ್ನನ್ನೇ ಯಜಿಸುತ್ತಾರೆ. ನೀನೇ ಯಜ್ಞ ಮತ್ತು ಪರಮ ಅಧ್ವರ. ಈ ಮೂರು ಲೋಕಗಳನ್ನು ಸೃಷ್ಟಿಸಿ ಕಾಲವು ಪ್ರಾಪ್ತವಾದಾಗ ಪುನಃ ಇದನ್ನು ಸಮಿದ್ಧವನ್ನಾಗಿ ಜೀರ್ಣಿಸಿಕೊಳ್ಳುತ್ತೀಯೆ. ಈ ಸರ್ವ ಭುವನಗಳು ನಿನ್ನಿಂದ ಹುಟ್ಟಿವೆ. ನೀನೇ ಇವುಗಳ ಅಂತ್ಯ. ನಿನ್ನನ್ನು ಮೋಡವೆಂದೂ ಕರೆಯುತ್ತಾರೆ. ವಿದ್ಯುತ್ತೂ ನೀನೇ. ನಿನ್ನಿಂದ ಹೊರಡುವ ಜ್ವಾಲೆಗಳಿಂದ ಸರ್ವಭೂತಗಳನ್ನು ಸುಡುತ್ತೀಯೆ. ನೀರು ನಿನ್ನಲ್ಲಿಯೇ ತುಂಬಿಕೊಂಡಿದೆ. ಈ ಜಗತ್ತೆಲ್ಲವೂ ನಿನ್ನನ್ನೇ ಅವಲಂಬಿಸಿದೆ. ಮೂರು ಲೋಕಗಳಲ್ಲಿ ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ತನ್ನಲ್ಲಿ ಹುಟ್ಟಿದವುಗಳನ್ನು ಸರ್ವವೂ ಪ್ರೀತಿಸುತ್ತವೆ. ನೀರನ್ನು ಪ್ರವೇಶಿಸು. ಶಂಕಿಸಬೇಡ! ಸನಾತನ ಬ್ರಾಹ್ಮೀ ಮಂತ್ರಗಳಿಂದ ನಿನ್ನನ್ನು ವೃದ್ಧಿಸುತ್ತೇನೆ.”

ಭಗವಾನ್ ಉತ್ತಮ ಕವಿಯು ಹೀಗೆ ಹವ್ಯವಾಹನನ್ನು ಸ್ತುತಿಸಲು ಅವನು ಬೃಹಸ್ಪತಿಗೆ ಪ್ರೀತಿಯಿಂದ ಈ ಉತ್ತಮ ಮಾತುಗಳನ್ನಾಡಿದನು: “ನಿನಗೆ ಶಕ್ರನನ್ನು ತೋರಿಸುತ್ತೇನೆ. ಸತ್ಯವನ್ನೇ ನಿನಗೆ ಹೇಳುತ್ತಿದ್ದೇನೆ.”

ಆಗ ವಹ್ನಿಯು ಸಮುದ್ರ ಮತ್ತು ಚಿಕ್ಕ ಹೊಂಡಗಳನ್ನೂ ಪ್ರವೇಶಿಸಿದನು. ಶತಕ್ರತುವು ಅಡಗಿದ್ದ ಸರೋವರಕ್ಕೂ ಹೋದನು. ಅಲ್ಲಿ ಪದ್ಮಗಳಲ್ಲಿ ಹುಡುಕುತ್ತಿರುವಾಗ ದಂಟಿನ ಮಧ್ಯದಲ್ಲಿದ್ದ ದೇವೇದ್ರನನ್ನು ಕಂಡನು. ತಕ್ಷಣವೇ ಹಿಂದಿರುಗಿ ಹೇಗೆ ಪ್ರಭುವು ಅಣುಮಾತ್ರದ ರೂಪದರಿಸಿ ಕಮಲದ ದಂಟಿನಲ್ಲಿ ನೆಲೆಸಿದ್ದಾನೆ ಎನ್ನುವುದನು ಬೃಹಸ್ಪತಿಗೆ ತಿಳಿಸಿದನು. ಆಗ ಬೃಹಸ್ಪತಿಯು ದೇವರ್ಷಿ-ಗಂಧರ್ವರೊಡನೆ ಅಲ್ಲಿಗೆ ಹೋಗಿ ಬಲಸೂದನನನ್ನು ಅವನ ಹಿಂದಿನ ಕರ್ಮಗಳನ್ನು ಹೇಳಿ ಸ್ತುತಿಸಿದನು: “ಶಕ್ರ! ದಾರುಣ ಮಹಾಸುರ ನಮುಚಿ, ಮತ್ತು ಹಾಗೆಯೇ ಘೋರವಿಕ್ರಮಿಗಳಾದ ಶಂಬರ ಮತ್ತು ಬಲರೀರ್ವರೂ ನಿನ್ನಿಂದ ಹತನಾದರು. ಶತಕ್ರತೋ! ವೃದ್ಧಿಹೊಂದು! ಎಲ್ಲಾ ಶತ್ರುಗಳನ್ನೂ ನಿಷೂದಿಸು. ವಜ್ರಿನ್! ಎದ್ದೇಳು! ಸೇರಿರುವ ದೇವ-ಋಷಿಗಳನ್ನು ನೋಡು. ಮಹೇಂದ್ರ! ವಿಭೋ! ದಾನವರನ್ನು ಸಂಹರಿಸಿ ನೀನು ಲೋಕಗಳನ್ನು ಉದ್ಧರಿಸಿದ್ದೀಯೆ. ದೇವರಾಜ! ಜಗತ್ಪತೇ! ನೀರಿನ ನೊರೆಯನ್ನು ಸೇರಿಸಿ, ವಿಷ್ಣು ತೆಜಸ್ಸಿನಿಂದ ಬಲಿಷ್ಟನಾಗಿ ಹಿಂದೆ ವೃತ್ರನು ನಿನ್ನಿಂದ ಹತನಾದನು. ನೀನು ಸರ್ವಭೂತಗಳಲ್ಲಿ ಶ್ರೇಷ್ಠ, ಮತ್ತು ಮೆಚ್ಚಿನವನು. ನಿನ್ನ ಸಮನಾದ ಭೂತಗಳಿರುವುದೇ ಗೊತ್ತಿಲ್ಲ. ಶಕ್ರ! ಸರ್ವಭೂತಗಳೂ ನಿನ್ನನ್ನು ಆಧರಿಸಿವೆ. ನೀನು ದೇವತೆಗಳ ಮಹಿಮೆಯನ್ನು ಹೆಚ್ಚಿಸಿದ್ದೀಯೆ. ಮಹೇಂದ್ರ! ಬಲವನ್ನು ಪಡೆದು ದೇವತೆಗಳನ್ನೂ ಎಲ್ಲ ಲೋಕಗಳನ್ನೂ ರಕ್ಷಿಸು.”

ಈ ರೀತಿ ಸ್ತುತಿಸಲ್ಪಟ್ಟ ಅವನು ನಿಧಾನವಾಗಿ ವರ್ಧಿಸಿದನು. ತನ್ನದೇ ರೂಪವನ್ನು ತಳೆದು ಬಲಾನ್ವಿತನಾಗಿ ಎದುರಿಗಿದ್ದ ದೇವ ಗುರು ಬೃಹಸ್ಪತಿಗೆ ಹೇಳಿದನು: “ತ್ವಷ್ಟ್ರಿಯ ಮಗ ಮಹಾಸುರ ಮತ್ತು ಸುಮಹಾಕಾಯನಾಗಿ ಲೋಕಗಳನ್ನೇ ನುಂಗಲಿದ್ದ ವೃತ್ರನ ಸಂಹಾರವಾದ ನಂತರ ಇನ್ನೇನು ಕಾರ್ಯವು ಉಳಿದುಕೊಂಡಿದೆ?”

ಬೃಹಸ್ಪತಿಯು ಹೇಳಿದನು: “ಮನುಷ್ಯರ ರಾಜ ನಹುಷನು ದೇವರ್ಷಿಗಣಗಳ ತೇಜಸ್ಸಿನಿಂದ ದೇವರಾಜ್ಯವನ್ನು ಪಡೆದು ಎಲ್ಲರನ್ನೂ ತುಂಬಾ ಬಾಧಿಸುತ್ತಿದ್ದಾನೆ.”

ಇಂದ್ರನು ಹೇಳಿದನು: “ದುರ್ಲಭವಾದ ದೇವತೆಗಳ ರಾಜ್ಯವನ್ನು ನಹುಷನು ಹೇಗೆ ಪಡೆದನು? ಬೃಹಸ್ಪತೇ! ಯಾವ ತಪಸ್ಸನ್ನು ಅವನು ಮಾಡಿದನು? ಅವನ ವೀರ್ಯವೆಷ್ಟು?”

ಬೃಹಸ್ಪತಿಯು ಹೇಳಿದನು: “ನೀನು ಮಹೇಂದ್ರ ಪದವಿಯನ್ನು ತ್ಯಜಿಸಿದಾಗ ಭೀತರಾದ ದೇವತೆಗಳು ಶಕ್ರನನ್ನು ಬಯಸಿದರು. ಶಕ್ರ! ಆಗ ದೇವತೆಗಳು, ಪಿತ್ರುಗಳು ಮತ್ತು ಋಷಿಗಳು ಗಂಧರ್ವಗಣಗಳನ್ನೂ ಕೂಡಿ ಎಲ್ಲರೂ ನಹುಷನಲ್ಲಿಗೆ ಹೋಗಿ “ನೀನು ಭುವನದ ರಾಜನೂ ಗೋಪ್ತನೂ ಆಗು” ಎಂದು ಹೇಳಿದರು. ಅವರಿಗೆ ನಹುಷನು “ನಾನು ಶಕ್ರನಾಗುವುದಿಲ್ಲ. ನಿಮ್ಮ ತಪಸ್ಸು ಮತ್ತು ತೇಜಸ್ಸನ್ನು ನನ್ನಲ್ಲಿ ತುಂಬಿ.” ಹೀಗೆ ಹೇಳಲು ಅವನನ್ನು ದೇವತೆಗಳು ವರ್ಧಿಸಿದರು. ಘೋರವೀರ್ಯದ ನಹುಷನು ರಾಜನಾದನು. ತ್ರೈಲೋಕ್ಯದ ರಾಜ್ಯವನ್ನು ಪಡೆದು ತಪಸ್ವಿಗಳನ್ನು ವಾಹನವನ್ನಾಗಿಟ್ಟುಕೊಂಡು ಆ ದುರಾತ್ಮನು ಲೋಕಗಳಲ್ಲಿ ಸಂಚರಿಸುತ್ತಿದ್ದಾನೆ. ತೇಜೋಹರನಾದ, ದೃಷ್ಟಿವಿಷನಾದ, ಸುಘೋರನಾದ ನಹುಷನನ್ನು ನೀನು ಎಂದೂ ನೋಡಬಾರದು. ದೇವತೆಗಳೆಲ್ಲರೂ ನಹುಷನಿಗೆ ಹೆದರಿ ವೇಷಮರೆಸಿಕೊಂಡು ನಡೆಯುತ್ತಾರೆ ಮತ್ತು ಅವನನ್ನು ನೋಡುವುದೇ ಇಲ್ಲ.”

ಈ ರೀತಿಯಾಗಿ ಅಂಗಿರಸರಲ್ಲಿ ಹಿರಿಯವನಾದ ಬೃಹಸ್ಪತಿಯು ಮಾತನಾಡುತ್ತಿರಲು ಅಲ್ಲಿಗೆ ಲೋಕಪಾಲ ಕುಬೇರ, ವೈಚಸ್ವತ ಪುರಾಣ ಯಮ, ದೇವ ಸೋಮ ಮತ್ತು ವರುಣರು ಆಗಮಿಸಿದರು. ಅವರು ಅಲ್ಲಿ ಬಂದು ಸೇರಿ ಮಹೇಂದ್ರನಿಗೆ ಹೇಳಿದರು: “ಒಳ್ಳೆಯದಾಯಿತು ತ್ವಷ್ಟನ ಮಗ ಮತ್ತು ವೃತ್ರರು ಹತರಾದರು. ಶಕ್ರ! ಒಳ್ಳೆಯದಾಯಿತು ಅರಿಗಳನ್ನು ಸಂಹರಿಸಿದ ನಿನ್ನನ್ನು ನಾವು ಕುಶಲನಾಗಿರುವುದನ್ನೂ ಕ್ಷಯಿಸದೆ ಇರುವುದನ್ನೂ ನೋಡುತ್ತಿದ್ದೇವೆ.” ಶಕ್ರನು ಅವರಿಗೆ, ನಹುಷನ ವಿರುದ್ಧವಾಗಿ ಪ್ರತಿಚೋದಿಸಿ ಉತ್ತರಿಸಿದನು: “ಘೋರರೂಪಿ ದೇವತೆಗಳ ರಾಜ ನಹುಷನ ಕುರಿತು ನನಗೆ ನಿಮ್ಮ ಸಹಾಯವನ್ನು ನೀಡಬೇಕು.”

ಅವರು ಹೇಳಿದರು: “ಘೋರರೂಪೀ ನಹುಷನ ದೃಷ್ಟಿಯು ವಿಷ. ದೇವ! ನಾವು ಹೆದರಿದ್ದೇವೆ. ನಹುಷನನ್ನು ನೀನು ಪರಾಜಯಗೊಳಿಸಿದರೆ ನಾವು ಹವಿಸ್ಸಿನ ಭಾಗಗಳಿಗೆ ನಾವು ಅರ್ಹರಾಗುತ್ತೇವೆ.”

ಇಂದ್ರನು ಹೇಳಿದನು: “ಹಾಗೆಯೇ ಆಗಲಿ! ಇಂದು ನೀನು, ಅಪಾಂಪತಿ, ಯಮ, ಕುಬೇರರು ನನ್ನೊಂದಿಗೆ ಅಭಿಷಿಕ್ತರಾಗೋಣ. ಘೋರದೃಷ್ಟಿಯ ಶತ್ರು ನಹುಷನನ್ನು ಜಯಿಸೋಣ.”

ಆಗ ಅಗ್ನಿಯು ಶಕ್ರನಿಗೆ ಹೇಳಿದನು: “ಹವಿಸ್ಸಿನಲ್ಲಿ ನನಗೂ ಭಾಗವನ್ನು ನೀಡು. ನಾನೂ ಕೂಡ ನಿನಗೆ ಸಹಾಯ ಮಾಡುತ್ತೇನೆ.” ಶಕ್ರನು ಅವನಿಗೆ ಹೇಳಿದನು: “ಅಗ್ನೇ! ನೀನು ಕೂಡ ಮಹಾಕ್ರತುಗಳಲ್ಲಿ ಇಂದ್ರ ಮತ್ತು ಅಗ್ನಿಗಳೆಂಬ ಒಂದೇ ಭಾಗಕ್ಕೆ ಅರ್ಹನಾಗುತ್ತೀಯೆ.”

ಹೀಗೆ ಸಮಾಲೋಚಿಸಿ ಪಾಕಶಾಸನ ಭಗವಾನ್ ಮಹೇಂದ್ರನು ಕುಬೇರನಿಗೆ ಸರ್ವಯಕ್ಷರ ಮತ್ತು ಧನಗಳ ಪ್ರಭುತ್ವವನ್ನ್ನು, ವೈವಸ್ವತನಿಗೆ ಪಿತೃಗಳ, ವರುಣನಿಗೆ ನೀರುಗಳ ಅಧಿಪತ್ಯವನ್ನು ಕೊಟ್ಟನು. ಶಕ್ರನು ಅವರನ್ನು ಸತ್ಕರಿಸಿ ಹರಸಿದನು. ಧೀಮತ ದೇವರಾಜನು ನಹುಷನ ವಧೆಯ ಉಪಾಯವನ್ನು ಲೋಕಪಾಲಕರೊಡನೆ ಸಮಾಲೋಚಿಸುತ್ತಿರಲು ಅಲ್ಲಿ ತಪಸ್ವೀ ಭಗವಾನ್ ಅಗಸ್ತ್ಯನು ಕಾಣಿಸಿಕೊಂಡನು. ಅವನು ಇಂದ್ರನನ್ನು ಅರ್ಚಿಸಿ ಹೇಳಿದನು: “ಒಳ್ಳೆಯದಾಯಿತು! ನೀನು ವಿಶ್ವರೂಪನ ವಿನಾಶ ಮತ್ತು ವೃತ್ರಾಸುರನ ವಧೆಯ ನಂತರ ವೃದ್ಧಿಸಿದ್ದೀಯೆ. ಪುರಂದರ! ಒಳ್ಳೆಯದಾಯಿತು! ದೇವರಾಜ್ಯದಿಂದ ನಹುಷನು ಭ್ರಷ್ಟನಾಗಿದ್ದಾನೆ. ಒಳ್ಳೆಯದಾಯಿತು! ನಿನ್ನ ಶತ್ರುಗಳು ನಾಶವಾಗಿ ನಿನ್ನನ್ನು ನಾನು ನೋಡುತ್ತಿದ್ದೇನೆ.”

ಇಂದ್ರನು ಹೇಳಿದನು: “ಮಹರ್ಷೇ! ನಿನಗೆ ಸ್ವಾಗತ. ನಿನ್ನ ದರ್ಶನದಿಂದ ನಾನು ಪ್ರೀತನಾಗಿದ್ದೇನೆ. ನನ್ನಿಂದ ಈ ಪಾದ್ಯ, ಆಚಮನೀಯ ಮತ್ತು ಅರ್ಘ್ಯವನ್ನು ಸ್ವೀಕರಿಸು!” ಆ ಮುನಿಸತ್ತಮನನ್ನು ಪೂಜಿಸಿ ಆಸನದಲ್ಲಿ ಕುಳ್ಳಿರಿಸಿ ಸಂತೋಷಗೊಂಡ ದೇವೇಶನು ಬ್ರಾಹ್ಮಣರ್ಷಭನನ್ನು ಕೇಳಿದನು: “ಭಗವನ್! ಪಾಪನಿಶ್ಚಯ ನಹುಷನು ಸ್ವರ್ಗದಿಂದ ಹೇಗೆ ಪರಿಭ್ರಷ್ಟನಾದ ಎಂದು ಕೇಳಲು ಬಯಸುತ್ತೇನೆ.”

ಅಗಸ್ತ್ಯನು ಹೇಳಿದನು: “ಶಕ್ರ! ದುರಾತ್ಮ, ರಾಜಾ, ದುರಾಚಾರಿ, ಬಲದರ್ಪಿತ ನಹುಷನು ಸ್ವರ್ಗದಿಂದ ಹೇಗೆ ಭ್ರಷ್ಟನಾದ ಎನ್ನುವ ಪ್ರಿಯ ವಾರ್ತೆಯನ್ನು ಕೇಳು. ಪಾಪಕಾರಿಣಿ ನಹುಷನನ್ನು ಹೊತ್ತು ಆಯಾಸಗೊಂಡ ಮಹಾಭಾಗ, ಅಮಲ ಬ್ರಹ್ಮರ್ಷಿ ದೇವರ್ಷಿಗಳು ನಹುಷನನ್ನು ಕೇಳಿದರು: “ಹಸುಗಳಿಗೆ ಪ್ರೋಕ್ಷಣೆ ಮಾಡುವಾಗ ಹೇಳುವ ಮಂತ್ರಗಳು ವೇದಗಳಲ್ಲಿ ಇವೆಯಷ್ಟೇ! ಅವುಗಳಿಗೆ ಪ್ರಮಾಣಗಳಿವೆಯೇ ಹೇಳು!” ತಮಸ್ಸಿನಿಂದ ಮೂಢಚೇತನನಾಗಿದ್ದ ನಹುಷನು ಇಲ್ಲವೆಂದು ಹೇಳಿದನು. ಆಗ ಋಷಿಗಳು ಹೇಳಿದರು: “ನೀನು ಅಧರ್ಮದಲ್ಲಿ ನಡೆದುಕೊಳ್ಳುತ್ತಿದ್ದೀಯೆ. ಧರ್ಮದಲ್ಲಿ ನಡೆಯುತ್ತಿಲ್ಲ. ಹಿಂದೆ ಮಹರ್ಷಿಗಳು ಇವಕ್ಕೆ ಪ್ರಮಾಣಗಳಿವೆಯೆಂದು ಹೇಳಿದ್ದಾರೆ.” ಹೀಗೆ ಮುನಿಗಳೊಂದಿಗೆ ವಾದಿಸುತ್ತಿರಲು ಅಧರ್ಮಪೀಡಿತನಾದ ಅವನು ಪಾದದಿಂದ ನನ್ನ ನೆತ್ತಿಯನ್ನು ಮುಟ್ಟಿದನು. ಆಗ ಅವನು ತೇಜಸ್ಸನ್ನು ಕಳೆದುಕೊಂಡು ಭಯಭೀತನಾದನು. ಆ ಭಯಪೀಡಿತ ಅವಿಗ್ನನಿಗೆ ನಾನು ಹೇಳಿದೆನು: “ಪೂರ್ವದಲ್ಲಿ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಬ್ರಹ್ಮರ್ಷಿಗಳು ಅನುಷ್ಠಾನ ಮಾಡುತ್ತಿರುವುದನ್ನು ಅದುಷ್ಟವೆಂದು ದೂಷಿಸುತ್ತಿದ್ದೀಯೆ ಮತ್ತು ಪಾದದಿಂದ ನನ್ನನ್ನು ಸ್ಪರ್ಷಿಸಿದ್ದೀಯೆ. ಮೂಢ! ಬ್ರಹ್ಮನ ಸಮಾನರಾದ ದುರಾಸದರಾದ ಈ ಋಷಿಗಳನ್ನು ವಾಹನಗಳನ್ನಾಗಿಸಿ ಪ್ರಯಾಣಿಸುತ್ತಿದ್ದೀಯಲ್ಲ! ನೀನು ಸ್ವರ್ಗದಿಂದ ಪ್ರಭೆಯನ್ನು ಕಳೆದುಕೊಂಡು ಬೀಳು. ಪುಣ್ಯವನ್ನು ಕಳೆದುಕೊಂಡು ಮಹೀತಲದಲ್ಲಿ ಪರಿಭ್ರಷ್ಟನಾಗಿ ಹತ್ತು ಸಾವಿರ ವರ್ಷಗಳು ಮಹಾ ಸರ್ಪದ ರೂಪವನ್ನು ಧರಿಸಿ ಸಂಚರಿಸುತ್ತೀಯೆ. ಪಾಪವು ಸಂಪೂರ್ಣವಾಗಿ ಧ್ವಂಸವಾದ ನಂತರ ಪುನಃ ಸ್ವರ್ಗವನ್ನು ಪಡೆಯುತ್ತೀಯೆ.” ಈ ರೀತಿ ಆ ದುರಾತ್ಮನು ದೇವರಾಜ್ಯದಿಂದ ಭ್ರಷ್ಟನಾದನು. ಶಕ್ರ! ಆ ಬ್ರಾಹ್ಮಣಕಂಟಕನು ಹತನಾದುದು ಮತ್ತು ನೀನು ವೃದ್ಧಿಹೊಂದಿದುದು ಒಳ್ಳೆಯದೇ ಆಯಿತು. ತ್ರಿವಿಷ್ಟಪವನ್ನು ಸೇರಿ ಲೋಕಗಳನ್ನು ಪಾಲಿಸು. ಜಿತೇಂದ್ರಿಯರೂ ಶತ್ರುಗಳನ್ನು ಗೆದ್ದವರೂ ಆದ ಮಹರ್ಷಿಗಳಿಂದ ಸ್ತುತಿಸಿಕೊಳ್ಳು.”

ಆಗ ದೇವತೆಗಳು ತುಂಬಾ ಸಂತೋಷಗೊಂಡು ಮಹರ್ಷಿಗಣಗಳಿಂದ, ಪಿತೃಗಳು, ಯಕ್ಷರು, ಭುಜಗರು, ರಾಕ್ಷಸರು, ಗಂಧರ್ವರು, ದೇವಕನ್ಯೆಯರು ಮತ್ತು ಅಪ್ಸರ ಗಣಗಳಿಂದ ಸುತ್ತುವರೆಯಲ್ಪಟ್ಟರು. ಸರೋವರಗಳು, ನದಿಗಳು, ಪರ್ವತಗಳು, ಸಾಗರಗಳು ಎಲ್ಲರೂ ಹತ್ತಿರಬಂದು ಹೇಳಿದರು: “ಶತ್ರುಹನ್! ನೀನು ವರ್ಧಿಸುತ್ತಿರುವುದು ಒಳ್ಳೆಯದಾಯಿತು! ಧೀಮಂತ ಅಗಸ್ತ್ಯನಿಂದ ಆ ಪಾಪಿ ನಹುಷನು ಹತನಾದುದೂ ಒಳ್ಳೆಯದೇ ಆಯಿತು. ಒಳ್ಳೆಯದಾಯಿತು ಆ ಪಾಪಿಯನ್ನು ಮಹೀತಲದಲ್ಲಿ ಸರ್ಪವಾಗಿ ಸಂಚರಿಸುವಂತೆ ಮಾಡಲಾಯಿತು.”  ಗಂಧರ್ವಾಪ್ಸರ ಗಣಗಳಿಂದ ಸ್ತುತಿಸಲ್ಪಟ್ಟ ಇಂದ್ರ ಶಕ್ರನು ಲಕ್ಷಣಗಳಿಂದ ಕೂಡಿದ ಐರಾವತವನ್ನು ಏರಿದನು. ಮಹಾತೇಜಸ್ವಿ ಅಗ್ನಿ, ಮಹರ್ಷಿ ಬೃಹಸ್ಪತಿ ಮತ್ತು ಯಮ, ವರುಣ ಮತ್ತು ಧನೇಶ್ವರ ಕುಬೇರರು ಒಡಗೂಡಿದರು. ವೃತ್ರ ನಿಷೂದನ ಪ್ರಭು ಶಕ್ರನು ಸರ್ವ ದೇವತೆಗಳಿಂದ ಗಂಧರ್ವ, ಅಪ್ಸರೆಯರಿಂದ ಪರಿವೃತನಾಗಿ ತ್ರಿಭುವನಕ್ಕೆ ಪ್ರಯಾಣಿಸಿದನು. ಆ ಶತಕ್ರತು ದೇವರಾಜನು ಮಹೇಂದ್ರಾಣಿಯನ್ನು ಸೇರಿ ಪರಮ ಸಂತೋಷದಿಂದ ದೇವರಾಜ್ಯವನ್ನು ಪಾಲಿಸಿದನು.

ಅಲ್ಲಿಗೆ ಭಗವಾನ್ ಅಂಗಿರಸನು ಕಾಣಿಸಿಕೊಂಡನು. ಅವನು ದೇವೇಂದ್ರನನ್ನು ಅಥರ್ವ ವೇದ ಮಂತ್ರಗಳಿಂದ ಪೂಜಿಸಿದನು. ಆಗ ಭಗವಾನ್ ಇಂದ್ರನು ಸಂತೋಷಗೊಂಡು ಅಥರ್ವಾಂಗಿರಸನಿಗೆ ವರವನ್ನು ನೀಡಿದನು. “ಈ ವೇದವು ಅಥರ್ವಾಂಗಿರಸ ಎಂಬ ಹೆಸರನ್ನು ಹೊಂದುತ್ತದೆ. ಉದಾಹರಣೆಗೆ ಇದಕ್ಕೆ ಯಜ್ಞದ ಭಾಗವೂ ದೊರೆಯುತ್ತದೆ.”

ಈ ರೀತಿ ಅಥರ್ವಾಂಗಿರಸನನ್ನು ಸಂಪೂಜಿಸಿ ಭಗವಾನ್ ಮಹಾರಾಜ ದೇವರಾಜ ಶತುಕ್ರತುವು ಕಳುಹಿಸಿಕೊಟ್ಟನು. ಸರ್ವ ತ್ರಿದಶರನ್ನೂ ತಪೋಧನ ಋಷಿಗಳನ್ನು ಸಂಪೂಜಿಸಿ ಇಂದ್ರನು ಸಂತೋಷಗೊಂಡು ಪ್ರಜೆಗಳನ್ನು ಧರ್ಮದಿಂದ ಪಾಲಿಸಿದನು. ಹೀಗೆ ಭಾರ್ಯೆಯೊಂದಿಗೆ ಇಂದ್ರನು ದುಃಖವನ್ನು ಹೊಂದಿ ಶತ್ರುಗಳ ವಧೆಯನ್ನು ಬಯಸಿ ಅಜ್ಞಾತವಾಸವನ್ನು ಮಾಡಿದನು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *