ಕರ್ಣಾವಸಾನದ ನಂತರ ದುರ್ಯೋಧನನು ಶಲ್ಯನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದುದು

ಕರ್ಣನು ಹತನಾದ ನಂತರ ಕೃಪನು ದುರ್ಯೋಧನನಿಗೆ ಯುದ್ಧವನ್ನು ನಿಲ್ಲಿಸುವ ಸಲಹೆಯನ್ನಿತ್ತಿದುದು

ಅರ್ಜುನನಿಂದ ಸೂತಪುತ್ರ ಕರ್ಣನು ಹತನಾಗಲು, ಒಂದುಗೂಡಿಸಲು ಪ್ರಯತ್ನಿಸಿದರೂ, ಸೇನೆಗಳು ಓಡಿಹೋದವು. ಶೋಕದಿಂದ ಚೇತನವನ್ನೇ ಕಳೆದುಕೊಂಡ ದುರ್ಯೋಧನನು ವಿಮುಖನಾಗಿದ್ದನು ಮತ್ತು ಪಾರ್ಥನ ವಿಕ್ರಮವನ್ನು ನೋಡಿ ಸೇನೆಗಳಲ್ಲಿ ತುಂಬಾ ಭಯ-ಉದ್ವೇಗಗಳುಂಟಾಗಿದ್ದವು. ದುಃಖವನ್ನು ಪಡೆದು ಚಿಂತಿಸುತ್ತಿರುವ ಸೇನೆಯನ್ನು ನೋಡಿ, ಸೇನೆಯನ್ನು ಸದೆಬಡಿಯುತ್ತಿರುವವರ ಸಿಂಹನಾದಗಳನ್ನು ಕೇಳಿ, ಯುದ್ಧಭೂಮಿಯಲ್ಲಿ ನರೇಂದ್ರರ ಧ್ವಜಗಳು ಛಿನ್ನವಿಚ್ಛಿನ್ನವಾದುದನ್ನು ನೋಡಿ, ಮಹಾತ್ಮರ ರಥನೀಡಗಳೂ ರಥಗಳೂ ಬಿದ್ದಿರುವುದನ್ನು ನೋಡಿ, ರಣದಲ್ಲಿ ಹತರಾಗಿ ಬಿದ್ದಿದ್ದ ಆನೆಗಳನ್ನೂ ಪದಾತಿಗಳನ್ನೂ ನೋಡಿ, ರುದ್ರನ ಆಟದ ಮೈದಾನವಾದ ಸ್ಮಶಾನದಂತೆ ಕಾಣುತ್ತಿದ್ದ ಆ ರಣಭೂಮಿಯನ್ನು ನೋಡಿ, ಲಕ್ಷಗಟ್ಟಲೆ ರಾಜರುಗಳು ನಿರ್ನಾಮವಾದುದನ್ನು ನೋಡಿ, ಕೃಪಾವಿಷ್ಟನಾದ, ವಯಸ್ಸಿಗೆ ತಕ್ಕಂತಹ ನಡತೆಗಳನ್ನುಳ್ಳ, ಮಾತನಾಡುವುದರಲ್ಲಿ ಚತುರನಾಗಿದ್ದ ತೇಜಸ್ವಿ ಕೃಪನು ಜನಾಧಿಪ ದುರ್ಯೋಧನನ ಬಳಿಸಾರಿ ದೈನ್ಯದಿಂದ ಈ ಮಾತುಗಳನ್ನಾಡಿದನು:

“ದುರ್ಯೋಧನ! ನಾನು ಹೇಳುವುದನ್ನು ಕೇಳು! ಅದನ್ನು ಕೇಳಿ ನಿನಗೆ ಯಾವುದು ಸೂಕ್ತವೆಂದು ತೋರುವುದೋ ಅದರಂತೆಯೇ ಮಾಡು! ಯುದ್ಧಧರ್ಮವನ್ನಾಶ್ರಯಿಸಿ ಯುದ್ಧಮಾಡುವುದಕ್ಕಿಂತ ಶ್ರೇಯಸ್ಕರವಾದ ಇನ್ನೊಂದು ಮಾರ್ಗವು ಕ್ಷತ್ರಿಯರಿಗಿಲ್ಲ! ಕ್ಷತ್ರಿಯನಾಗಿ ಜೀವಿಸುವವನಿಗೆ ಪುತ್ರ, ಭ್ರಾತಾ, ಪಿತ, ಸೋದರಳಿಯ, ಸೋದರ ಮಾವ, ಮತ್ತು ಇತರ ಬಂಧು-ಬಾಂಧವರೊಡನೆ ಯುದ್ಧಮಾಡುವುದು ಅನಿವಾರ್ಯವಾಗುತ್ತದೆ. ಯುದ್ಧದಲ್ಲಿ ಶತ್ರುಗಳನ್ನು ವಧಿಸುವುದು ಅಥವಾ ಅವರಿಂದ ವಧಿಸಲ್ಪಡುವುದು ಪರಮ ಧರ್ಮವೆನಿಸಿಕೊಳ್ಳುತ್ತದೆ. ಪಲಾಯನಮಾಡುವುದು ಅಧರ್ಮ. ಕ್ಷತ್ರಿಯನಾಗಿ ಜೀವಿಸುವವನು ಈ ರೀತಿಯ ಘೋರ ಜೀವನಶೈಲಿಯನ್ನು ಪಾಲಿಸುತ್ತಾನೆ. ಅದಕ್ಕೆ ಸಂಬಂಧಿಸಿದಂತೆ ನಿನಗೆ ಒಂದಿಷ್ಟು ಹಿತವಚನವನ್ನು ಹೇಳುತ್ತೇನೆ.

“ಮಹಾರಥರಾದ ಭೀಷ್ಮ, ದ್ರೋಣ, ಕರ್ಣ, ಜಯದ್ರಥ, ನಿನ್ನ ಸಹೋದರರು ಮತ್ತು ನಿನ್ನ ಮಗ ಲಕ್ಷ್ಮಣರು ಹತರಾಗಿರಲು ನಾವು ಬೇರೆ ಯಾರನ್ನು ಆಶ್ರಯಿಸೋಣ? ನಾವು ಯಾರ ಮೇಲೆ ಭಾರವನ್ನು ಹೊರಿಸಿ ಈ ರಾಜ್ಯದ ಆಸೆಯನ್ನಿಟ್ಟುಕೊಂಡಿದ್ದೆವೋ ಆ ಶೂರರೆಲ್ಲರೂ ತಮ್ಮ ದೇಹಗಳನ್ನು ತ್ಯಾಗಮಾಡಿ ಬ್ರಹ್ಮವಿದರ ಗತಿಯನ್ನು ಹೊಂದಿದರು. ಗುಣವತ್ತ ಮಹಾರಥರಿಂದ ಈಗ ನಾವು ವಿಹೀನರಾಗಿದ್ದೇವೆ. ಅನೇಕ ನೃಪರನ್ನು ಬಲಿಗೊಟ್ಟು ನಾವೀಗ ಶೋಕಸ್ಥಿತಿಯಲ್ಲಿದ್ದೇವೆ. ಅವರೆಲ್ಲರೂ ಜೀವಿತರಾಗಿದ್ದು ಒಟ್ಟಾಗಿ ಸೆಣೆಸಿದ್ದರೂ ಬೀಭತ್ಸು ಅರ್ಜುನನನ್ನು ಸೋಲಿಸಲಾಗುತ್ತಿರಲಿಲ್ಲ. ಕೃಷ್ಣನನ್ನೇ ಕಣ್ಣಾಗುಳ್ಳ ಆ ಮಹಾಬಾಹುವು ದೇವತೆಗಳಿಗೂ ಕಷ್ಟಸಾಧ್ಯನು. ಇಂದ್ರಧನುಸ್ಸಿನಂತೆ ಎತ್ತರವಾಗಿ ಹೊಳೆಯುತ್ತಿರುವ ವಾನರಧ್ವಜವನ್ನು ಎದುರಿಸಿ ಮಹಾಸೇನೆಯು ನಡುಗಿದೆ. ಭೀಮನ ಸಿಂಹನಾದ, ಪಾಂಚಜನ್ಯದ ಧ್ವನಿ ಮತ್ತು ಗಾಂಡೀವದ ನಿರ್ಘೋಷದಿಂದ ನಮ್ಮವರ ಮನಸ್ಸುಗಳು ಮೋಹಗೊಳ್ಳುತ್ತಿವೆ. ಕಣ್ಣಿನ ಪ್ರಭೆಯನ್ನು ಅಪಹರಿಸಿ ತಿರುಗುತ್ತಿರುವ ಮಹಾ ಮಿಂಚಿನಂತೆ ಅರ್ಜುನನ ಗಾಂಡೀವವು ಕಾಣುತ್ತಿದೆ. ಸೆಳೆಯಲ್ಪಡುತ್ತಿರುವ ಆ ಚಿನ್ನ-ಚಿತ್ರಿತ ಮಹಾ ಧನುಸ್ಸು ಮೋಡಗಳ ಮಧ್ಯದಲ್ಲಿ ಕಾಣಿಸಿಕೊಳ್ಳುವ ಮಿಂಚಿನಂತೆ ಸರ್ವ ದಿಕ್ಕುಗಳಲ್ಲಿ ಕಾಣಿಸುತ್ತಿದೆ. ಕೃಷ್ಣನು ನಡೆಸುತ್ತಿರುವ ವಾಯುವಿನಂತೆ ಅತಿವೇಗದ ರಥದಲ್ಲಿ ಕುಳಿತು ಅಸ್ತ್ರವಿದ ಶ್ರೇಷ್ಠ ಅರ್ಜುನನು ಶಿಶಿರ ಋತುವಿನಲ್ಲಿ ಗಹನ ಹುಲ್ಲು ಮೆದೆಗಳನ್ನು ಅಗ್ನಿಯು ಹೇಗೋ ಹಾಗೆ ನಿನ್ನ ಸೇನೆಯನ್ನು ದಹಿಸಿಬಿಟ್ಟಿದ್ದಾನೆ. ಮಹೇಂದ್ರನ ಪ್ರಭೆಯುಳ್ಳ ಧನಂಜಯನು ನಾಲ್ಕು ದಂತಗಳಿರುವ ಸಲಗದಂತೆ ಸೇನೆಗಳಲ್ಲಿ ನುಗ್ಗಿ ಹೋಗುತ್ತಿರುವುದನ್ನು ನಾವು ನೋಡಿದೆವು. ಕಮಲಗಳ ಸರೋವರಕ್ಕೆ ಆನೆಯು ಹೇಗೋ ಹಾಗೆ ಧನಂಜಯನು ನಿನ್ನ ಸೇನೆಗಳನ್ನು ನುಗ್ಗಿ ಅಲ್ಲೋಲಕಲ್ಲೋಲಗೊಳಿಸಿ ಪಾರ್ಥಿವರನ್ನು ನಡುಗಿಸಿದುದನ್ನು ನಾವು ನೋಡಿದೆವು. ಸಿಂಹವು ಮೃಗಗಣಗಳನ್ನು ಹೇಗೋ ಹಾಗೆ ಪಾಂಡವನು ತನ್ನ ಧನುರ್ಷೋಷದಿಂದ ಯೋಧರನ್ನು ಪುನಃ ಪುನಃ ಭಯಗೊಳಿಸುತ್ತಿರುವುದನ್ನು ನಾವು ನೋಡಿದೆವು. ಸರ್ವಲೋಕ ಮಹೇಷ್ವಾಸರೂ, ಸರ್ವಧನ್ವಿಗಳ ವೃಷಭರೂ ಆದ ಕವಚಧಾರೀ ಕೃಷ್ಣರಿಬ್ಬರೂ ಲೋಕಮಧ್ಯದಲ್ಲಿ ವಿರಾಜಿಸುತ್ತಿದ್ದಾರೆ. ಯುದ್ಧದಲ್ಲಿ ವಧೆಯಾಗುತ್ತಿರುವ ಈ ಅತಿ ಘೋರ ಸಂಗ್ರಾಮದ ಹದಿನೇಳನೇ ದಿನವು ಇಂದು ನಡೆಯುತ್ತಿದೆ.

“ಶರತ್ಕಾಲದ ಮೋಡ ಸಮೂಹಗಳು ಗಾಳಿಯಿಂದ ಚದುರಿಹೋಗುವಂತೆ ನಿನ್ನ ಸೇನೆಗಳೆಲ್ಲವೂ ಎಲ್ಲ ಕಡೆ ಚದುರಿಹೋಗಿವೆ. ಮಹಾಸಮುದ್ರದಲ್ಲಿ ಭಿರುಗಾಳಿಗೆ ಸಿಲುಕಿ ನಡುಗುತ್ತಿರುವ ಹಡಗಿನಂತೆ ಸವ್ಯಸಾಚಿಯು ನಿನ್ನ ಸೇನೆಯನ್ನು ನಡುಗಿಸುತ್ತಿದ್ದಾನೆ! ಜಯದ್ರಥನು ಅವನ ಬಾಣದ ಲಕ್ಷ್ಯವಾಗಿದ್ದಾಗ ಸೂತಪುತ್ರನು ಎಲ್ಲಿದ್ದನು? ದ್ರೋಣನು ಎಲ್ಲಿದ್ದನು? ನಾನು ಅಥವಾ ನೀನು ಎಲ್ಲಿದ್ದೆವು? ಹಾಗೆಯೇ ಹಾರ್ದಿಕ್ಯನು ಎಲ್ಲಿದ್ದನು? ಸಹೋದರರೊಂದಿಗೆ ನಿನ್ನ ಭ್ರಾತಾ ದುಃಶಾಸನನು ಎಲ್ಲಿದ್ದನು? ನಿನ್ನ ಸಹಾಯಕ ಸಂಬಂಧಿಗಳು, ಸಹೋದರರು, ಸೋದರ ಮಾವಂದಿರು ಮತ್ತು ಎಲ್ಲರ ನೆತ್ತಿಯ ಮೇಲೆ ಕಾಲಿಟ್ಟು ಅರ್ಜುನನು ಒಂದೇ ಕ್ಷಣದಲ್ಲಿ ಜಯದ್ರಥನನು ಸಂಹರಿಸಿದನು. ಇನ್ನೇನು ನಾವು ಮಾಡಬಹುದಾಕಿತ್ತು? ಪಾಂಡವನನ್ನು ಜಯಿಸಬಲ್ಲ ಪುರುಷನು ನಮ್ಮವರಲ್ಲಿ ಯಾರಿದ್ದಾರೆ? ಆ ಮಹಾತ್ಮನ ವಿವಿಧ ದಿವ್ಯಾಸ್ತ್ರಗಳು ಮತ್ತು ಗಾಂಡೀವ ನಿರ್ಘೋಷವು ನಮ್ಮ ವೀರ್ಯಗಳನ್ನು ಅಪಹರಿಸಿಬಿಟ್ಟಿವೆ! ನಾಯಕನನ್ನು ಕಳೆದುಕೊಂಡ ನಮ್ಮ ಈ ಸೇನೆಯು ಚಂದ್ರನಿಲ್ಲದ ರಾತ್ರಿಯಂತೆ, ಆನೆಗಳಿಂದ ವೃಕ್ಷಗಳು ನಾಶವಾದ ವನದಂತೆ ಮತ್ತು ಬತ್ತಿಹೋದ ನದಿಯಂತೆ ವ್ಯಾಕುಲಗೊಂಡಿದೆ. ನೇತಾರನನ್ನು ಕಳೆದುಕೊಂಡ ನಮ್ಮ ಸೇನೆಯೊಳಗೆ ನುಗ್ಗಿ ಮಹಾಬಾಹು ಶ್ವೇತವಾಹನನು ಅಗ್ನಿಯು ಹುಲ್ಲುಮೆದೆಗಳನ್ನು ಹೇಗೋ ಹಾಗೆ ಸುಡುತ್ತಾ ಸಂಚರಿಸುತ್ತಿದ್ದಾನೆ. ವೇಗಶಾಲೀ ಸಾತ್ಯಕಿ-ಭೀಮಸೇನರಿಬ್ಬರೂ ಗಿರಿಗಳೆಲ್ಲವನ್ನೂ ಸೀಳಬಲ್ಲರು ಮತ್ತು ಸಾಗರಗಳನ್ನು ಬತ್ತಿಸಬಲ್ಲರು. ಸಭಾಮಧ್ಯದಲ್ಲಿ ಭೀಮನು ಏನೆಲ್ಲ ಮಾತುಗಳನ್ನು ಆಡಿದ್ದನೋ ಅವೆಲ್ಲವನ್ನೂ ಮಾಡಿದ್ದಾನೆ ಮತ್ತು ಮುಂದೆ ಮಾಡುತ್ತಾನೆ ಕೂಡ! ಗಾಂಡೀವ ಧನ್ವಿಯು ವ್ಯೂಹ ರಚಿಸಿ ರಕ್ಷಿಸುತ್ತಿರುವ ಆ ಪಾಂಡವ ಸೇನೆಯು ಕರ್ಣನ ನಾಯಕತ್ವದಲ್ಲಿಯೂ ದುರಾಸದವಾಗಿತ್ತು. ಅಕಾರಣವಾಗಿ ಸಾಧುಗಳೊಂದಿಗೆ ಅಸಾಧುಗಳಂತೆ ವರ್ತಿಸಿದುದಕ್ಕಾಗಿ ಅದರ ಫಲವು ನಮಗೆ ದೊರೆಯುತ್ತಿದೆ. ನಿನಗೋಸ್ಕರವಾಗಿ ನೀನು ಕರೆದಿರುವ ಎಲ್ಲರೂ ಪ್ರಯತ್ನಪಟ್ಟರೂ ಅವರಾಗಲೀ ಅಥವಾ ನೀನಾಗಲೀ ಉಳಿಯುವುದು ಸಂಶಯವೇ ಆಗಿದೆ.

“ಮಗೂ! ದುರ್ಯೋಧನ! ನಿನ್ನನ್ನು ನೀನು ರಕ್ಷಿಸಿಕೋ! ಈ ಶರೀರವೇ ಸರ್ವ ಸುಖಗಳ ಅನುಭವಸ್ಥಾನವಾಗಿದೆ. ಪಾತ್ರೆಯು ಒಡೆದಾಗ ಅದರಲ್ಲಿರುವ ನೀರು ಎಲ್ಲ ಕಡೆ ಹರಿದುಹೋಗುವಂತೆ ಶರೀರವು ನಾಶವಾಗಲು ಸರ್ವ ಸುಖಗಳೂ ಅಂತ್ಯಗೊಳ್ಳುತ್ತವೆ. ತನ್ನ ಬಲವು ಶತ್ರುಬಲಕ್ಕಿಂತ ಕಡಿಮೆಯಾಗಿರುವಾಗ ಅಥವಾ ಸಮನಾಗಿರುವಾಗ ಶತ್ರುಗಳೊಡನೆ ಸಂಧಿಯ ಮಾರ್ಗವನ್ನು ಹುಡುಕಬೇಕು. ಅಧಿಕವಾಗಿರುವಾಗ ಯುದ್ಧಮಾಡಬೇಕು. ಇದೇ ಬೃಹಸ್ಪತಿಯ ನೀತಿ. ಈಗ ನಾವು ನಮ್ಮ ಶಕ್ತಿಯಲ್ಲಿ ಪಾಂಡುಪುತ್ರರಿಗಿಂತಲೂ ಹೀನರಾಗಿದ್ದೇವೆ. ಆದುದರಿಂದ ಪಾಂಡವರೊಂದಿಗೆ ಸಂಧಿಯೇ ಸರಿಯಾದುದೆಂದು ಅನ್ನಿಸುತ್ತಿದೆ. ಯಾವ ರೀತಿಯಲ್ಲಿ ನಡೆದರೆ ಶ್ರೇಯಸ್ಸುಂಟಾಗುತ್ತದೆ ಎನ್ನುವುದನ್ನು ಅರಿಯದವನು ಶ್ರೇಯಸ್ಸನ್ನು ಅಪಮಾನಿಸಿದಂತೆ. ಅವನು ಕ್ಷಿಪ್ರವಾಗಿ ರಾಜ್ಯ-ಶ್ರೇಯಸ್ಸುಗಳನ್ನು ಕಳೆದುಕೊಳ್ಳುತ್ತಾನೆ. ರಾಜ ಯುಧಿಷ್ಠಿರನಿಗೆ ತಲೆಬಾಗಿ ನಮ್ಮ ರಾಜ್ಯವನ್ನು ಪಡೆದುಕೊಂಡೆವೆಂದರೆ ಅದರಿಂದ ನಮಗೆ ಶ್ರೇಯಸ್ಸೇ ಉಂಟಾಗುತ್ತದೆ. ಮೌಡ್ಯತನದಿಂದ ಹೀಗೆಯೇ ಮುಂದುವರೆದರೆ ಪರಾಭವವನ್ನು ಹೊಂದುತ್ತೇವೆಯೇ ವಿನಃ ಶ್ರೇಯಸ್ಸು ದೊರಕುವುದಿಲ್ಲ. ಕೃಪಾಶೀಲ ಯುಧಿಷ್ಠಿರನು ವೈಚಿತ್ರವೀರ್ಯನ ಅಥವಾ ಗೋವಿಂದನ ಹೇಳಿಕೆಯಂತೆ ನಿನಗೇ ರಾಜ್ಯವೆಲ್ಲವನ್ನು ನೀಡಿಯಾನು! ಹೃಷೀಕೇಶನು ಯುಧಿಷ್ಠಿರನಿಗೆ ಏನನ್ನು ಹೇಳುವನೋ ಅದರಂತೆಯೇ ಭೀಮಾರ್ಜುನರೆಲ್ಲರೂ ಮಾಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಧೃತರಾಷ್ಟ್ರನ ಮಾತನ್ನು ಕೃಷ್ಣನು ಉಲ್ಲಂಘಿಸುವುದಿಲ್ಲ, ಮತ್ತು ಅಂತೆಯೇ ಕೃಷ್ಣನ ಮಾತನ್ನು ಪಾಂಡವರು ಉಲ್ಲಂಘಿಸುವುದಿಲ್ಲ. ನೀನು ಪಾರ್ಥರೊಂದಿಗೆ ಯುದ್ಧವನ್ನು ನಿಲ್ಲಿಸುವುದೇ ಉತ್ತಮವೆಂದು ನನಗನ್ನಿಸುತ್ತಿದೆ. ಇದನ್ನು ನಾನು ಯುದ್ಧಮಾಡುವುದು ಕಷ್ಟವೆಂಬ ಕಾರಣದಿಂದಾಗಲೀ ಪ್ರಾಣರಕ್ಷಣೆಯ ಸಲುವಾಗಲೀ ಹೇಳುತ್ತಿಲ್ಲ. ನಿನಗೆ ಪಥ್ಯ-ಹಿತವಾಗುವ ಮಾತನ್ನು ಹೇಳುತ್ತಿದ್ದೇನೆ.”

ಹೀಗೆ ಹೇಳಿ ವೃದ್ಧ ಶಾರದ್ವತ ಕೃಪನು ಬಿಸಿಬಿಸಿ ನಿಟ್ಟುಸಿರು ಬಿಡುತ್ತಾ, ಬಹಳವಾಗಿ ಶೋಕಿಸುತ್ತಾ, ದುಃಖಾತಿರೇಕದಿಂದ ಮೂರ್ಛಿತನಾದನು.

ಗೌತಮನು ಹೀಗೆ ಹೇಳಲು ರಾಜ ದುರ್ಯೋಧನನು ದೀರ್ಘವಾಗಿ ಬಿಸಿಬಿಸಿ ನಿಟ್ಟುಸಿರು ಬಿಟ್ಟು ಸುಮ್ಮನಿದ್ದನು. ಸ್ವಲ್ಪಕಾಲ ಯೋಚಿಸಿ ಧಾರ್ತರಾಷ್ಟ್ರನು ಶಾರದ್ವತ ಕೃಪನಿಗೆ ಇಂತೆಂದನು: “ಸುಹೃದಯರು ಏನೆಲ್ಲ ಹೇಳಬೇಕೋ ಅವೆಲ್ಲವನ್ನೂ ನೀವು ನನಗೆ ಹೇಳಿದ್ದೀರಿ. ನಿಮ್ಮ ಪ್ರಾಣ ಸರ್ವಸ್ವವನ್ನೂ ತ್ಯಜಿಸಿ ಯುದ್ಧಮಾಡುತ್ತಿರುವಿರಿ! ಅತಿತೇಜಸ್ವಿ ಮಹಾರಥ ಪಾಂಡವರ ಸೇನೆಗಳಲ್ಲಿ ನುಗ್ಗಿ ಯುದ್ಧಮಾಡುತ್ತಿರುವ ನಿಮ್ಮನ್ನು ಲೋಕವೇ ಅವಲೋಕಿಸಿದೆ. ಆದರೆ ಸುಹೃದತೆಯಿಂದ ನೀವು ನನಗೆ ಹೇಳಿದ ಮಾತುಗಳು ಸಾಯುವವನಿಗೆ ಔಷಧಿಯು ಹೇಗೋ ಹಾಗೆ ಪ್ರಿಯವೆನಿಸುತ್ತಿಲ್ಲ. ವಿಪ್ರಾಗ್ರ್ಯ! ನೀವು ಯುಕ್ತಿ ಮತ್ತು ಕಾರಣಗಳಿಂದ ಸುಸಂಗತ- ಹಿತಕರ-ಉತ್ತಮ ಮಾತುಗಳನ್ನೇ ಆಡಿರುವಿರಿ. ಆದರೆ ಅವು ನನಗೆ ರುಚಿಸುತ್ತಿಲ್ಲ. ನಮ್ಮಿಂದಲೇ ರಾಜ್ಯವಂಚಿತನಾದ ಅವನು ನಮ್ಮೊಡನೆ ಹೇಗೆ ವಿಶ್ವಾಸವಿಡುತ್ತಾನೆ? ಅಕ್ಷದ್ಯೂತದಲ್ಲಿ ಮಹಾಧವನ್ನು ಗೆದ್ದ ನಮ್ಮ ಮಾತುಗಳಲ್ಲಿ ಪುನಃ ಆ ನೃಪತಿಯು ಹೇಗೆ ಶ್ರದ್ಧೆಯಿಡುತ್ತಾನೆ? ಹಾಗೆಯೇ ದ್ಯೂತದ ಪರಿಣಾಮವಾಗಿ ಪಾರ್ಥಹಿತರತನಾಗಿರುವ ಹೃಷೀಕೇಶನು ಸಂಧಿಗಾಗಿ ಬಂದಾಗ ಅವನನ್ನು ನಾವು ವಿರೋಧಿಸಿದೆವು. ಈಗ ಅವನು ನಮ್ಮ ಮಾತನ್ನು ಹೇಗೆ ಮನ್ನಿಸುತ್ತಾನೆ? ಸಭಾಮಧ್ಯದಲ್ಲಿ ಕೃಷ್ಣೆಯನ್ನು ಎಳೆತಂದಾಗ ಅವಳು ವಿಲಪಿಸಿದುದನ್ನು ಮತ್ತು ರಾಜ್ಯಹರಣವನ್ನು ಕೃಷ್ಣನು ಎಂದಿಗೂ ಸಹಿಸುವವನಲ್ಲ. ಕೃಷ್ಣರಿಬ್ಬರ ಪ್ರಾಣವೂ ಒಂದೇ. ಅವರು ಅನ್ಯೋನ್ಯರನ್ನು ಆಶ್ರಯಿಸಿರುವವರು ಎಂದು ಹೇಳಿದುದನ್ನು ನಾನು ಹಿಂದೆ ಕೇಳಿದ್ದೆ. ಆದರೆ ಅದನ್ನು ಇಂದು ಪ್ರತ್ಯಕ್ಷವಾಗಿ ಕಾಣುತ್ತಿದ್ದೇನೆ. ಸೋದರಳಿಯನು ಹತನಾದುದನ್ನು ಕೇಳಿ ಕೇಶವನು ದುಃಖದಿಂದ ನಿದ್ದೆಮಾಡುತ್ತಿಲ್ಲ. ಅವನ ಮೇಲೆ ಈ ಅಪರಾಧವೆಸಗಿದ ನಮ್ಮನ್ನು ಅವನು ಹೇಗೆ ತಾನೇ ಕ್ಷಮಿಸಿಯಾನು? ಅಭಿಮನ್ಯುವಿನ ವಿನಾಶದಿಂದ ಅರ್ಜುನನಿಗೆ ಸುಖವೆಂಬುದೇ ಇಲ್ಲವಾಗಿದೆ. ಪ್ರಾರ್ಥಿಸಿದರೂ ಅವನು ನನ್ನ ಹಿತವನ್ನು ಏಕೆ ಪ್ರಯತ್ನಿಸುತ್ತಾನೆ? ಮಧ್ಯಮ ಪಾಂಡವ ತೀಕ್ಷ್ಣ ಮಹಾಬಲ ಭೀಮಸೇನನು ಉಗ್ರ ಪ್ರತಿಜ್ಞೆಯನ್ನು ಮಾಡಿರುವನು. ಅವನು ಭಗ್ನನಾಗಬಲ್ಲನೇ ಹೊರತು ಬಾಗುವವನಲ್ಲ! ಕವಚಗಳನ್ನು ತೊಟ್ಟು ಖಡ್ಗಗಳನ್ನು ಸೊಂಟಗಳಿಗೆ ಕಟ್ಟಿಕೊಂಡಿರುವ ಯಮರೂಪದ ವೀರ ಯಮಳರು ಕೂಡ ನಮಗೆ ಬದ್ಧವೈರಿಗಳು. ಧೃಷ್ಟದ್ಯುಮ್ನ-ಶಿಖಂಡಿಯರು ಸಹ ನನ್ನೊಡನೆ ವೈರವನ್ನು ಕಟ್ಟಿಕೊಂಡಿರುವರು. ಅವರಿಬ್ಬರೂ ನನ್ನ ಹಿತಕ್ಕಾಗಿ ಏಕೆ ಪ್ರಯತ್ನಿಸುವರು? ಏಕವಸ್ತ್ರಳೂ ರಜಸ್ವಲೆಯೂ ಆಗಿದ್ದ ಕೃಷ್ಣೆಯನ್ನು ದುಃಶಾಸನನು ಸಭಾಮಧ್ಯದಲ್ಲಿ ಸರ್ವರೂ ನೋಡುತ್ತಿರುವಂತೆಯೇ ಕಾಡಿಸಿದ್ದು, ಹಾಗೆಯೇ ಆ ದೀನಳಾದವಳನ್ನು ವಸ್ತ್ರಹೀನಳನ್ನಾಗಿ ಮಾಡಿದುದು ಇವುಗಳನ್ನು ಸ್ಮರಿಸಿಕೊಂಡಿರುವ ಪರಂತಪ ಪಾಂಡವರು ಈಗ ಸಂಗ್ರಾಮವನ್ನು ನಿಲ್ಲಿಸಲು ಸಾಧ್ಯವಿಲ್ಲ. ದುಃಖಿತಳಾದ ದ್ರೌಪದೀ ಕೃಷ್ಣೆಯು ತನ್ನ ಪತಿಯಂದಿರ ಅರ್ಥಸಿದ್ಧಿಗಾಗಿ ಉಗ್ರತಪಸ್ಸನ್ನು ತಪಿಸುತ್ತಿದ್ದಾಳೆ. ವೈರದ ಯಾತನೆಯಿರುವವರೆಗೆ ಅವಳು ನಿತ್ಯವೂ ನೆಲದ ಮೇಲೆಯೇ ಮಲಗುತ್ತಿದ್ದಾಳೆ. ಮಾನ-ದರ್ಪಗಳನ್ನು ಬದಿಗೊತ್ತಿ ವಾಸುದೇವನ ಸಹೋದರಿ ಸುಭದ್ರೆಯು ಕೃಷ್ಣೆಯ ದಾಸಿಯಾಗಿ ಸದಾ ಅವಳ ಶುಶ್ರೂಷೆಯನ್ನು ಮಾಡುತ್ತಿದ್ದಾಳೆ. ಹೀಗೆ ಎಲ್ಲ ಪ್ರಕಾರಗಳಿಂದಲೂ ವೃದ್ಧಿಯಾಗುತ್ತಿರುವ ವೈರವನ್ನು ನಿವಾರಿಸಲು ಎಂದೂ ಸಾಧ್ಯವಿಲ್ಲ. ಅಭಿಮನ್ಯುವಿನ ವಿನಾಶ ಕಾರಣನಾದ ನನ್ನೊಂದಿಗೆ ಅವರು ಹೇಗೆ ತಾನೇ ಸಂಧಿಮಾಡಿಕೊಂಡಾರು?

“ಪಾಂಡವರ ಪ್ರಸಾದವಾದ ಭೂಮಿಯನ್ನು ಅಲ್ಪಕ ರಾಜನಂತೆ ನಾನು ಹೇಗೆ ತಾನೇ ಭೋಗಿಸಲಿ? ರಾಜರನ್ನು ಮೆಟ್ಟಿ ಭಾಸ್ಕರನಂತೆ ಪ್ರಜ್ವಲಿಸುತ್ತಿರುವ ನಾನು ಹೇಗೆ ತಾನೇ ಯುಧಿಷ್ಟಿರನ ಹಿಂದೆ ಓರ್ವ ದಾಸನಂತೆ ಹೋಗಬಲ್ಲೆ? ಸ್ವಯಂ ನಾನು ಭೋಗಗಳನ್ನು ಭೋಗಿಸಿ ಪುಷ್ಕಲ ದಾನಗಳನ್ನು ನೀಡಿ ದೈನ್ಯನಾಗಿ ದೀನತೆಯಿಂದ ಹೇಗೆ ಜೀವಿಸಬಲ್ಲೆ? ನಿನ್ನ ಸ್ನೇಹಪೂರಕ-ಹಿತಕರ ಮಾತುಗಳನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ ಸಂಧಿಮಾಡಿಕೊಳ್ಳುವ ಕಾಲವೊದಗಿದೆ ಎನ್ನುವುದನ್ನು ಮಾತ್ರ ಸರ್ವಥಾ ಒಪ್ಪಿಕೊಳ್ಳುವುದಿಲ್ಲ. ಉತ್ತಮ ನೀತಿಯನ್ನನುಸರಿಸಿ ಉತ್ತಮವಾಗಿ ಯುದ್ಧಮಾಡಬೇಕೆಂದು ನನಗೆ ತೋರುತ್ತದೆ. ದುರ್ಬಲರಾಗಿರುವ ಕಾಲವಿದಲ್ಲ. ನಾವು ಇನ್ನೂ ಸರಿಯಾಗಿ ಯುದ್ಧಮಾಡುವ ಕಾಲವಿದು.

“ನಾನು ವಿಪ್ರರಿಗೆ ದಕ್ಷಿಣೆಗಳನ್ನಿತ್ತು ಅನೇಕ ಇಷ್ಟಿ-ಯಜ್ಞಗಳನ್ನು ಮಾಡಿದ್ದೇನೆ. ವೇದ-ಶ್ರುತಿಗಳನ್ನು ಕಲಿತುಕೊಂಡಿರುವೆನು. ಶತ್ರುಗಳ ತಲೆಮೆಟ್ಟಿ ನಿಂತಿದ್ದೇನೆ. ಭೃತ್ಯರ ಪಾಲನೆ-ಪೋಷಣೆಗಳನ್ನು ಮಾಡುತ್ತಿದ್ದೇನೆ. ದೀನ ದಲಿತರನ್ನು ಉದ್ಧರಿಸಿದ್ದೇನೆ. ಪರರಾಷ್ಟ್ರಗಳನ್ನೂ ನನ್ನ ರಾಷ್ಟ್ರಗಳಲ್ಲಿ ಸೇರಿಸಿಕೊಂಡು ಪರಿಪಾಲಿಸುತ್ತಿದ್ದೇನೆ. ವಿವಿಧ ಭೋಗಗಳನ್ನು ಅನುಭವಿಸಿದ್ದೇನೆ. ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳನ್ನೂ ಸೇವಿಸಿದ್ದೇನೆ. ಕ್ಷತ್ರಿಯ ಧರ್ಮ ಮತ್ತು ಪಿತೃಗಳ ಋಣಗಳೆರಡನ್ನೂ ತೀರಿಸಿದ್ದೇನೆ. ಸುಖವೇ ಶಾಶ್ವತವಿಲ್ಲದಿರುವಾಗ ರಾಜ್ಯವಾಗಲೀ ಯಶಸ್ಸಾಗಲೀ ಹೇಗೆ ತಾನೇ ಶಾಶ್ವತವಾಗಿರುವವು? ಇಲ್ಲಿ ಕೀರ್ತಿಯನ್ನು ಯುದ್ಧದಿಂದ ಮಾತ್ರ ಪಡೆಯಬಹುದೇ ವಿನಃ ಅನ್ಯ ಕಾರ್ಯಗಳಿಂದಲ್ಲ! ಮನೆಯಲ್ಲಿ ನಿಧನಹೊಂದಿದ ಕ್ಷತ್ರಿಯನು ಅತಿನಿಂದನೀಯನು. ಅದರಲ್ಲೂ ಮನೆಯಲ್ಲಿ ಹಾಸಿಗೆಯ ಮೇಲೆ ಮರಣಹೊಂದಿದರೆ ಮಹಾ ಅಧರ್ಮವೆನಿಸಿಕೊಳ್ಳುತ್ತದೆ. ಮಹಾ ಕ್ರತುಗಳನ್ನು ಮಾಡಿ ಅರಣ್ಯದಲ್ಲಿ ಅಥವಾ ಸಂಗ್ರಾಮದಲ್ಲಿ ಶರೀರತ್ಯಾಗ ಮಾಡುವ ಕ್ಷತ್ರಿಯನು ಮಹಾ ಮಹಿಮೆಯನ್ನು ಪಡೆಯುತ್ತಾನೆ. ಮುಪ್ಪಿನಿಂದ ಶಿಥಿಲವಾದ ಶರೀರವುಳ್ಳವನಾಗಿ ರೋಗಪೀಡಿತನಾಗಿ ಆರ್ತನಾಗಿ ವಿಲಪಿಸುತ್ತಾ ಗೋಳಾಡುತ್ತಿರುವ ಜ್ಞಾತಿಗಳ ಮಧ್ಯದಲ್ಲಿ ಮರಣಹೊಂದುವವನು ಖಂಡಿತವಾಗಿಯೂ ಪುರುಷನೇ ಅಲ್ಲ! ವಿವಿಧ ಭೋಗಗಳನ್ನು ಪರಿತ್ಯಜಿಸಿದವರಿಗೆ ಯಾವ ಪರಮ ಗತಿಯು ದೊರಕುವುದೋ ಆ ಉತ್ತಮ ಲೋಕಗಳಿಗೆ ನಾನು ಈ ಉತ್ತಮ ಯುದ್ಧದಿಂದ ಹೋಗುತ್ತೇನೆ! ಶೂರರಿಗೆ, ಉತ್ತಮ ನಡತೆಯುಳ್ಳವರಿಗೆ, ಸಂಗ್ರಾಮದಿಂದ ಹಿಂದಿರುಗದವರಿಗೆ, ಧೀಮತ ಸತ್ಯಸಂಧರಿಗೆ, ಕ್ರತು-ಯಜ್ಞಗಳನ್ನು ನಡೆಸಿದವರಿಗೆ, ಶಸ್ತ್ರಗಳಿಂದ ಅವಭೃತಸ್ನಾನ ಮಾಡಿ ಪೂತರಾದವರಿಗೆ – ಇವರೆಲ್ಲರಿಗೂ ಸ್ವರ್ಗವಾಸವು ನಿಶ್ಚಿತವಾಗಿದೆ. ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದವರನ್ನು ಅಪ್ಸರೆಯರು ಪರಮ ಸಂತೋಷದಿಂದ ಸ್ವಾಗತಿಸುತ್ತಾರೆ. ಶಕ್ರಸಭೆಯಲ್ಲಿ ಅಪ್ಸರೆಯರಿಂದ ಪರಿವೃತರಾಗಿ ಸ್ವರ್ಗದಲ್ಲಿ ಗೌರವಿಸಲ್ಪಡುವವರನ್ನು ಪಿತೃಗಳು ಕೂಡ ನೋಡಿ ಸಂತೋಷಪಡುತ್ತಾರೆ. ಯುದ್ಧದಿಂದ ಹಿಂದಿರುಗದಿರುವ ಶೂರರು ಹೋಗುವ ದಾರಿಯಲ್ಲಿಯೇ ಹೋದರೆ ನಾವೂ ಕೂಡ ಪಿತಾಮಹ ಭೀಷ್ಮ, ಧೀಮಂತ ಆಚಾರ್ಯ, ಜಯದ್ರಥ, ಕರ್ಣ ಮತ್ತು ದುಃಶಾಸನರು ಹೋಗಿರುವ ಪುಣ್ಯ ಲೋಕಗಳಿಗೆ ಹೋಗುತ್ತೇವೆ. ನನಗಾಗಿ ಸಂಘಟಿತರಾಗಿ ಬಂದಿರುವ ಶೂರ ಜನಾಧಿಪರು ಬಾಣಗಳಿಂದ ಗಾಯಗೊಂಡು ಅಂಗಗಳು ರಕ್ತದಿಂದ ತೋಯ್ದುಹೋಗಿ ರಣಭೂಮಿಯ ಮೇಲೆ ಮಲಗಿದ್ದಾರೆ. ಉತ್ತಮಾಸ್ತ್ರಗಳನ್ನು ತಿಳಿದಿದ್ದ ಶೂರರು ಯಥೋಕ್ತವಾಗಿ ಕ್ರತುಗಳನ್ನು ಯಾಜಿಸಿ ಯಥಾನ್ಯಾಯವಾಗಿ ಪ್ರಾಣಗಳನ್ನು ತೊರೆದು ಇಂದ್ರಲೋಕದಲ್ಲಿ ಆಶ್ರಯಪಡೆದಿದ್ದಾರೆ. ಮಹಾರಭಸದಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಮಡಿದು ಸದ್ಗತಿಯನ್ನು ಪಡೆದವರು ನಿರ್ಮಿಸಿದ ಈ ಮಾರ್ಗವು ಸುಗಮವಾಗಿದೆ. ಇಂತಹ ಮಾರ್ಗವು ಪುನಃ ದೊರೆಯದೇ ಇರಬಹುದು. ನನಗೋಸ್ಕರವಾಗಿ ಹತರಾಗಿರುವವರ ಕರ್ಮಗಳನ್ನು ಸ್ಮರಿಸುತ್ತಾ ಅವರ ಋಣದಿಂದ ಮುಕ್ತನಾಗಲು ಪ್ರಯತ್ನಿಸುತ್ತಿರುವ ನನಗೆ ರಾಜ್ಯದಲ್ಲಿ ಮನಸ್ಸಿಲ್ಲ. ಸ್ನೇಹಿತರು-ಸಹೋದರರು-ಪಿತಾಮಹರು ಎಲ್ಲರನ್ನೂ ಸಾಯಗೊಟ್ಟು ಈ ಜೀವವನ್ನು ರಕ್ಷಿಸಿಕೊಂಡರೆ ಲೋಕವು ನನ್ನನ್ನು ನಿಶ್ಚಯವಾಗಿಯೂ ನಿಂದಿಸುತ್ತದೆ. ಬಂಧು-ಸ್ನೇಹಿತ-ಸುಹೃದಯರಿಂದ ವಿಹೀನನಾಗಿ ಪಾಂಡವನಿಗೆ ಶರಣಾಗತನಾಗಿ ಪಡೆಯುವ ರಾಜ್ಯದ ರಾಜ್ಯಭಾರವಾದರೂ ಹೇಗಿರಬಹುದು? ಜಗತ್ತನ್ನೇ ಪರಾಭವಗೊಳಿಸಿದಂತಹ ಕಾರ್ಯಗಳನ್ನು ಮಾಡಿ ಈಗ ಉತ್ತಮ ಯುದ್ಧದಿಂದ ಸ್ವರ್ಗವನ್ನು ಪಡೆಯುತ್ತೇನೆ. ಅನ್ಯಥಾ ಇಲ್ಲ!”

ದುರ್ಯೋಧನನಾಡಿದ ಆ ಮಾತನ್ನು ಸರ್ವ ಕ್ಷತ್ರಿಯ ರಾಜರೂ ಗೌರವಿಸಿ “ಸಾಧು! ಸಾಧು!” ಎಂದು ಮಾತನಾಡಿಕೊಂಡರು. ತಮ್ಮ ಪರಾಜಯದ ಕುರಿತು ಶೋಕಿಸುವುದನ್ನು ನಿಲ್ಲಿಸಿ ಪರಾಕ್ರಮವನ್ನು ತೋರಿಸುವುದರಲ್ಲಿಯೇ ದೃಢಚಿತ್ತರಾಗಿ ಯುದ್ಧಮಾಡಲು ನಿಶ್ಚಯಿಸಿ ಮುದಿತ ಮನಸ್ಕರಾದರು. ಅನಂತರ ವಾಹನಗಳನ್ನು ಸಂತಯಿಸಿ, ಯುದ್ಧಾಭಿನಂದಿನ ಕೌರವರೆಲ್ಲರೂ ಅಲ್ಲಿಂದ ಎರಡು ಯೋಜನ ದೂರಕ್ಕೆ ಹೋಗಿ ನಿಂತುಕೊಂಡರು. ಆಕಾಶದಲ್ಲಿರುವಂತೆ ತೋರುತ್ತಿದ್ದ, ವೃಕ್ಷಭರಿತ ಪುಣ್ಯ ಹಿಮವತ್ಪರ್ವತ ತಪ್ಪಲಿನಲ್ಲಿ ಹರಿಯುತ್ತಿದ್ದ ಎಣೆಗೆಂಪಿನ ಸರಸ್ವತೀ ನದಿಗೆ ಹೋಗಿ ಆ ನೀರನ್ನು ಕುಡಿದು ಸ್ನಾನಮಾಡಿದರು. ಕಾಲಚೋದಿತ ಸರ್ವ ಕ್ಷತ್ರಿಯರೂ ದುರ್ಯೋಧನನಿಂದ ಪ್ರೋತ್ಸಾಹಿತರಾಗಿ ಅನ್ಯೋನ್ಯರೊಂದಿಗೆ ಸಂಭಾಷಣೆಗೈಯುತ್ತಾ ತಮ್ಮ ಮನಸ್ಸನ್ನು ಯುದ್ಧದಲ್ಲಿಯೇ ಸ್ಥಿರಗೊಳಿಸಿ ಪುನಃ ಯುದ್ಧಭೂಮಿಗೆ ಹಿಂದಿರುಗಿದರು.

ಶಲ್ಯಸೇನಾಪತ್ಯಾಭಿಷೇಕ

ಹಿಮಾಲಯದ ತಪ್ಪಲಿನಲ್ಲಿ ತಂಗಿ ಯುದ್ಧಾಭಿನಂದಿ ಯೋಧರೆಲ್ಲರೂ ಅಲ್ಲಿ ಸೇರಿದರು. ಶಲ್ಯ, ಚಿತ್ರಸೇನ, ಶಕುನಿ, ಅಶ್ವತ್ಥಾಮ, ಕೃಪ, ಕೃತವರ್ಮ, ಸುಷೇಣ, ಅರಿಷ್ಟಸೇನ, ಧೃತಸೇನ, ಮತ್ತು ಜಯತ್ಸೇನ ಇವರುಗಳು ರಾತ್ರಿಯನ್ನು ಕಳೆದರು. ರಣದಲ್ಲಿ ವೀರ ಕರ್ಣನು ಹತನಾಗಲು ಜಯದಿಂದ ಉಬ್ಬಿದ್ದ ಪಾಂಡವರ ಭಯದಿಂದ ತತ್ತರಿಸಿದ ಕೌರವರಿಗೆ ಆ ಹಿಮಾಲಯದ ತಪ್ಪಲಿನಲ್ಲಿಯೂ ಸಮಾಧಾನವು ದೊರಕಲಿಲ್ಲ. ರಣದಲ್ಲಿ ಪ್ರಯತ್ನಮಾಡಿ ಅಲ್ಲಿ ನೆರೆದಿದ್ದ ಅವರು ಸೈನ್ಯ ಸನ್ನಿಧಿಯಲ್ಲಿ ರಾಜನನ್ನು ವಿಧಿವತ್ತಾಗಿ ಗೌರವಿಸಿ ಅವನಿಗೆ ಹೇಳಿದರು: “ಸೇನಾನಾಯಕನನ್ನು ಮಾಡಿಕೊಂಡು ಶತ್ರುಗಳೊಂದಿಗೆ ನೀನು ಯುದ್ಧಮಾಡಬೇಕು. ಸೇನಾಪತಿಯ ರಕ್ಷಣೆಯಡಿಯಲ್ಲಿ ನಾವು ಸಂಗ್ರಾಮದಲ್ಲಿ ಜಯವನ್ನು ಗಳಿಸಬಲ್ಲೆವು!”

ಆಗ ದುರ್ಯೋಧನನು ಶ್ರೇಷ್ಠ ಉತ್ತಮ ರಥದಲ್ಲಿ ನಿಂತು ಸರ್ವಯುದ್ಧವಿಭಾವಜ್ಞನೂ, ಯುದ್ಧದಲ್ಲಿ ಅಂತಕನಂತಿರುವವನೂ ಆದ ಅಶ್ವತ್ಥಾಮನನ್ನು ನೋಡಿದನು. ಅಶ್ವತ್ಥಾಮನು ಸುಂದರಾಂಗನಾಗಿದ್ದನು. ಶಿರದಲ್ಲಿ ಕೇಶರಾಶಿಯುಳ್ಳವನಾಗಿದ್ದನು. ಕಂಬುಗ್ರೀವನೂ, ಪ್ರಿಯವದನೂ, ಅರಳಿದ ಕಮಲದಳಗಳಂತಿರುವ ಕಣ್ಣುಳ್ಳವನೂ, ವ್ಯಾಘ್ರದಂತೆ ವಿಶಾಲ ಮುಖವುಳ್ಳವನೂ, ಮೇರುಪರ್ವದಂತೆ ಗಂಭೀರನೂ, ಸ್ಥಾಣುವಿನ ನಂದಿಯಂತಹ ಹೆಗಲು-ಕಣ್ಣುಗಳು-ನಡಿಗೆ ಮತ್ತು ಗರ್ಜನೆಯುಳ್ಳವನೂ, ಪುಷ್ಟ-ಸುಸಂಘಟಿತ-ನೀಳ ತೋಳುಗಳುಳ್ಳವನೂ, ವಿಶಾಲ-ಶ್ರೇಷ್ಠ ವಕ್ಷಸ್ಥಳವುಳ್ಳವನೂ, ಅರುಣಾನುಜ ಗರುಡ ಮತ್ತು ವಾಯುವಿನ ಬಲ-ವೇಗವುಳ್ಳವನೂ, ಸೂರ್ಯನ ತೇಜಸ್ಸು ಮತ್ತು ಶುಕ್ರಾಚಾರ್ಯನ ಬುದ್ಧಿಯುಳ್ಳವನೂ, ಚಂದ್ರನ ಮುಖಕಾಂತಿ-ರೂಪೈಶ್ವರ್ಯಯುಕ್ತನೂ, ಸುವರ್ಣಶಿಲೆಯ ಕಾಂತಿಯ ಶರೀರವುಳ್ಳವನೂ, ಸುಘಟಿತ ಸಂಧಿಗಳಿಂದ ಕೂಡಿದವನೂ, ವೃತ್ತಾಕಾರದ ತೊಡೆ-ಕಟಿ-ಮೊಣಕಾಲಿನವನೂ, ಸುಂದರ ಪಾದ-ಬೆರಳು-ಉಗುರುಗಳಿದ್ದವನೂ, ಬ್ರಹ್ಮನು ಒಳ್ಳೊಳ್ಳೆಯ ಗುಣಗಳನ್ನು ಸ್ಮರಣೆಗೆ ತಂದುಕೊಂಡು ಪ್ರಯತ್ನಪೂರ್ವಕವಾಗಿ ನಿರ್ಮಿಸಿದಂತಿದ್ದ ಸುಂದರ ಅವಯವಗಳುಳ್ಳವನೂ, ಸರ್ವಲಕ್ಷಣ ಸಂಪನ್ನನೂ ಆಗಿದ್ದನು. ಅಶ್ವತ್ಥಾಮನು ನಿಪುಣನೂ, ಶ್ರುತಿಸಾಗರನೂ, ಶತ್ರುಗಳನ್ನು ಬಹುಬೇಗ ಜಯಿಸಬಲ್ಲವನೂ, ಶತ್ರುಗಳಿಗೆ ದುರ್ಲಭನೂ ಆಗಿದ್ದನು. ಅವನು ಧನುರ್ವೇದದ ಹತ್ತು ಅಂಗಗಳನ್ನು ಮತ್ತು ನಾಲ್ಕು ಪಾದಗಳನ್ನೂ ತಿಳಿದಿದ್ದನು. ಇಷ್ವಸ್ತ್ರಗಳ ತತ್ವಗಳನ್ನು ತಿಳಿದಿದ್ದಮು. ನಾಲ್ಕು ವೇದಗಳನ್ನು ಸಾಂಗವಾಗಿ ತಿಳಿದಿದ್ದನು. ಐದನೆಯ ವೇದವನ್ನು ತಿಳಿದಿದ್ದ ಅವನು ಉಗ್ರ ವ್ರತಾನುಷ್ಟಾನಗಳಿಂದ ಪ್ರಯತ್ನಪಟ್ಟು ತ್ರ್ಯಂಬಕನನ್ನು ಆರಾಧಿಸಿ ಅನುಗ್ರಹ ಪಡೆದುಕೊಂಡಿದ್ದನು. ಅಯೋನಿಜೆ ಕೃಪೆ ಮತ್ತು ಅಯೋನಿಜ ದ್ರೋಣರಿಂದ ಉತ್ಪನ್ನನಾಗಿದ್ದ ಅವನು ಅಪ್ರತಿಮ ಕರ್ಮಗಳನ್ನೆಸಗಿದ್ದನು. ರೂಪದಲ್ಲಿ ಭುವಿಯಲ್ಲಿಯೇ ಅಸದೃಶನಾಗಿದ್ದನು. ಸರ್ವವಿದ್ಯಾ ಪಾರಂಗತನೂ ಗುಣಗಳ ಸಾಗರನೂ ಆಗಿದ್ದನು.

ಆ ಅನಿಂದಿತ ಅಶ್ವತ್ಥಾಮನಿಗೆ ದುರ್ಯೋಧನನು ಹೇಳಿದನು: “ಗುರುಪುತ್ರ! ಯಾರನ್ನು ಮುಂದಿಟ್ಟುಕೊಂಡು ಒಟ್ಟಾಗಿ ನಾವು ಯುದ್ಧದಲ್ಲಿ ಪಾಂಡವರನ್ನು ಜಯಿಸಬಲ್ಲೆವೋ ಅಂತಹ ನೀನೇ ನಮ್ಮೆಲ್ಲರ ಪರಮ ಗತಿಯು. ಆದುದರಿಂದ ನಿನ್ನ ನಿರ್ದೇಶನದಂತೆಯೇ ನಾವು ನಡೆದುಕೊಳ್ಳುತ್ತೇವೆ. ಯಾರು ನನ್ನ ಸೇನಾಪತಿಯಾಗಬಹುದು?”

ದ್ರೌಣಿಯು ಹೇಳಿದನು: “ಈ ಶಲ್ಯನು ಕುಲ, ವೀರ್ಯ, ತೇಜಸ್ಸು, ಯಶಸ್ಸು ಮತ್ತು ಶ್ರೀ ಈ ಸರ್ವಗುಣಗಳಿಂದ ಸಮುದಿತನಾಗಿರುವನು. ಅವನೇ ನಮ್ಮ ಸೇನಾಪತಿಯಾಗಲಿ! ಕೃತಜ್ಞನಾದ ಇವನು ತಂಗಿಯ ಮಕ್ಕಳನ್ನೂ ಪರಿತ್ಯಜಿಸಿ ನಮ್ಮನ್ನು ಅನುಸರಿಸಿ ಬಂದಿದ್ದಾನೆ. ಈ ಮಹಾಬಾಹುವು ಮತ್ತೊಬ್ಬ ಕಾರ್ತಿಕೇಯನಂತೆ ಮಹಾಸೇನಾನಿಯಾಗಿದ್ದಾನೆ. ಅಪರಾಜಿತ ದೇವತೆಗಳು ಸ್ಕಂದನನ್ನು ಪಡೆದು ಜಯವನ್ನು ಗಳಿಸಿದಂತೆ ನಾವೂ ಕೂಡ ಈ ನೃಪತಿಯನ್ನು ಸೇನಾಪತಿಯನ್ನಾಗಿ ಮಾಡಿಕೊಂಡು ಜಯಗಳಿಸುತ್ತೇವೆ.”

ದ್ರೋಣಪುತ್ರನು ಹೀಗೆ ಹೇಳಲು ಸರ್ವ ನರಾಧಿಪರೂ ಶಲ್ಯನನ್ನು ಸುತ್ತುವರೆದು ನಿಂತು ಜಯಕಾರ ಮಾಡಿದರು. ಯುದ್ಧಮಾಡಬೇಕೆಂದು ನಿರ್ಧರಿಸಿ ಪರಮ ಆವೇಶಪೂರ್ಣರಾದರು. ಅನಂತರ ದುರ್ಯೋಧನನು ನೆಲದ ಮೇಲೆಯೇ ನಿಂತು ರಥದಲ್ಲಿ ಕುಳಿತಿದ್ದ, ರಣದಲ್ಲಿ ಪರಶುರಾಮ-ಭೀಷ್ಮರ ಸಮನಾಗಿದ್ದ ಶಲ್ಯನಿಗೆ ಕೈಮುಗಿದು ಹೇಳಿದನು: “ಮಿತ್ರವತ್ಸಲ! ವಿಧ್ವಾಂಸರು ಮಿತ್ರರು ಯಾರು ಮತ್ತು ಅಮಿತ್ರರು ಯಾರು ಎಂದು ಪರೀಕ್ಷಿಸುವಂತಹ, ಮಿತ್ರರಿಗೆ ಸರಿಯಾದ, ಕಾಲವು ಬಂದೊದಗಿದೆ. ಶೂರನಾದ ನೀನು ಸೇನಾಮುಖದಲ್ಲಿ ನಮ್ಮ ಪ್ರಣೇತನಾಗು. ನೀನು ಯುದ್ಧಕ್ಕೆ ಹೋದೆಯಾದರೆ ಮಂದಬುದ್ಧಿಯ ಪಾಂಡವರೂ, ಅಮಾತ್ಯರೊಂದಿಗೆ ಪಾಂಚಾಲರೂ ಉದ್ಯೋಗಶೂನ್ಯರಾಗುತ್ತಾರೆ!”

ಶಲ್ಯನು ಹೇಳಿದನು: “ರಾಜನ್! ನೀನು ನನಗೆ ಹೊರಿಸುವ ಕಾರ್ಯವನ್ನು ಮಾಡುತ್ತೇನೆ. ನನ್ನ ಪ್ರಾಣ, ರಾಜ್ಯ, ಧನ ಸರ್ವವೂ ನಿನ್ನ ಪ್ರೀತ್ಯರ್ಥವಾಗಿಯೇ ಇವೆ!”

ದುರ್ಯೋಧನನು ಹೇಳಿದನು: “ಮಾತುಲ! ಅತುಲ ಪರಾಕ್ರಮಿಯಾಗಿರುವ ನಿನ್ನನ್ನು ನಾನು ಸೇನಾಪತಿಯನ್ನಾಗಿ ಆರಿಸುತ್ತೇನೆ. ಯೋಧರಲ್ಲಿ ಶ್ರೇಷ್ಠ ಸ್ಕಂದನು ದೇವತೆಗಳನ್ನು ಹೇಗೋ ಹಾಗೆ ನೀನು ನಮ್ಮನ್ನು ಯುದ್ಧದಲ್ಲಿ ರಕ್ಷಿಸುವವನಾಗು! ಪಾವಕಿಯನ್ನು ದೇವತೆಗಳು ಹೇಗೋ ಹಾಗೆ ನಾನು ನಿನ್ನನ್ನು ಸೇನಾಪತಿಯಾಗಿ ಅಭಿಷೇಕಿಸುತ್ತೇನೆ. ಮಹೇಂದ್ರನು ದಾನವರನ್ನು ಹೇಗೋ ಹಾಗೆ ರಣದಲ್ಲಿ ಶತ್ರುಗಳನ್ನು ಸಂಹರಿಸು!”

ರಾಜನ ಈ ಮಾತನ್ನು ಕೇಳಿದ ಪ್ರತಾಪವಾನ್ ಮದ್ರರಾಜನು ದುರ್ಯೋಧನನಿಗೆ ಈ ಮಾತುಗಳನ್ನಾಡಿದನು: “ದುರ್ಯೋಧನ! ನನ್ನ ಮಾತನ್ನು ಕೇಳು! ಯಾರನ್ನು ನೀನು ರಥಿಗಳಲ್ಲಿ ಶ್ರೇಷ್ಠರೆಂದು ತಿಳಿದುಕೊಂಡಿರುವೆಯೋ ಆ ರಥಸ್ಥ ಕೃಷ್ಣರಿಬ್ಬರೂ ಬಾಹುವೀರ್ಯದಲ್ಲಿ ಎಂದೂ ನನಗೆ ಸರಿಸಾಟಿಯಾಗುವವರಲ್ಲ! ಸುರಾಸುರಮಾನವ ಸರ್ವರೊಂದಿಗೆ ಈ ಪೃಥ್ವಿಯೇ ಯುದ್ಧಕ್ಕೆ ನಿಂತರೂ ರಣಮುಖದಲ್ಲಿ ಸಂಕ್ರುದ್ಧನಾದ ನಾನು ಎದುರಿಸಿ ಯುದ್ಧಮಾಡಬಲ್ಲೆ! ಇನ್ನು ಪಾಂಡವರು ಯಾವ ಲೆಖ್ಕಕ್ಕೆ? ರಣದಲ್ಲಿ ಸೇರಿರುವ ಪಾರ್ಥರನ್ನೂ ಸೋಮಕರನ್ನೂ ನಾನು ಗೆಲ್ಲುತ್ತೇನೆ! ನಾನು ನಿನ್ನ ಸೇನಾಪತಿಯಾಗುತ್ತೇನೆ. ಅದರಲ್ಲಿ ಸಂಶಯವಿಲ್ಲ. ಶತ್ರುಗಳಿಗೆ ಭೇದಿಸಲಸಾಧ್ಯವಾದ ವ್ಯೂಹವನ್ನೂ ರಚಿಸುತ್ತೇನೆ. ದುರ್ಯೋಧನ! ನಾನುಹೇಳುತ್ತಿರುವ ಇದು ಸತ್ಯವಾದುದು. ಅದರಲ್ಲಿ ಸಂಶಯವಿಲ್ಲ!”

ಮದ್ರಾಧಿಪತಿಯು ಹೀಗೆ ಹೇಳಲು ರಾಜನು ಸೇನೆಗಳ ಮಧ್ಯದಲ್ಲಿ ಹೃಷ್ಟರೂಪನಾಗಿ ಶಾಸ್ತ್ರಗಳಲ್ಲಿ ತೋರಿಸಿಕೊಟ್ಟ ವಿಧಿಗಳಿಂದ ಅವನನ್ನು ಅಭಿಷೇಕಿಸಿದನು. ಅವನು ಅಭಿಷಿಕ್ತನಾಗಲು ಅಲ್ಲಿ ಮಹಾ ಸಿಂಹನಾದವು ಕೇಳಿಬಂದಿತು. ಕೌರವ ಸೇನೆಗಳಲ್ಲಿ ವಾದ್ಯಗಳು ಮೊಳಗಿದವು. ಆಗ ಮದ್ರಕ ಮಹಾರಥ ಯೋಧರು ಹರ್ಷಿತರಾಗಿ ಆಹವಶೋಭೀ ರಾಜಾ ಶಲ್ಯನನ್ನು ಸ್ತುತಿಸಿದರು: “ರಾಜನ್! ನಿನಗೆ ಜಯವಾಗಲಿ! ಚಿರಂಜೀವಿಯಾಗು! ಸಮಾಗತರಾಗಿರುವ ಶತ್ರುಗಳನ್ನು ಸಂಹರಿಸು! ನಿನ್ನ ಬಾಹುಬಲವನ್ನು ಪಡೆದಿರುವ ಮಹಾಬಲ ಧಾರ್ತರಾಷ್ಟ್ರರು ಶತ್ರುಗಳು ಹತರಾಗಿ ಅಖಿಲ ಪೃಥ್ವಿಯಲ್ಲವನ್ನೂ ಆಳುತ್ತಾರೆ! ರಣದಲ್ಲಿ ಸುರಾಸುರಮಾನವರನ್ನು ನೀನು ಗೆಲ್ಲಲು ಶಕ್ತನಾಗಿರುವಾಗ ಮರ್ತ್ಯಧರ್ಮವನ್ನನುಸರಿಸುವ ಸೋಮಕ-ಸೃಂಜಯರು ಯಾವ ಲೆಖ್ಕಕ್ಕೆ?”

ಹೀಗೆ ಸಂಸ್ತುತಿಸಲ್ಪಡಲು ಬಲಶಾಲೀ ವೀರ ಮದ್ರಾಧಿಪತಿಯು ಅಕೃತಾತ್ಮರಿಗೆ ದುರ್ಲಭ ಹರ್ಷವನ್ನು ಹೊಂದಿ ಹೇಳಿದನು: “ರಾಜೇಂದ್ರ! ಇಂದು ನಾನು ರಣದಲ್ಲಿ ಪಾಂಚಾಲರೊಂದಿಗೆ ಸರ್ವ ಪಾಂಡವರನ್ನೂ ಸಂಹರಿಸುತ್ತೇನೆ. ಅಥವಾ ಹತನಾಗಿ ಸ್ವರ್ಗಕ್ಕೆ ಹೋಗುತ್ತೇನೆ! ಇಂದು ನಿರ್ಭೀತನಾಗಿ ಸಂಚರಿಸುವ ನನ್ನನ್ನು ಲೋಕಗಳೆಲ್ಲವೂ, ಪಾಂಡುಸುತರೆಲ್ಲರೂ, ಸಾತ್ಯಕಿಯೊಂದಿಗೆ ವಾಸುದೇವ, ಪಾಂಚಾಲರು ಮತ್ತು ದ್ರೌಪದೇಯರೆಲ್ಲರೂ, ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಸರ್ವ ಪ್ರಭದ್ರಕರೂ ನೋಡಲಿ! ಯುದ್ಧದಲ್ಲಿ ನನ್ನ ವಿಕ್ರಮ, ಧನುಸ್ಸಿನ ಮಹಾ ಬಲ, ಹಸ್ತಲಾಘವ, ಅಸ್ತ್ರವೀರ್ಯ ಮತ್ತು ಭುಜಗಳ ಬಲವನ್ನು ನೋಡಲಿದ್ದಾರೆ! ನನ್ನಲ್ಲಿರುವ ಬಾಹು ಬಲವನ್ನೂ, ಅಸ್ತ್ರಗಳ ಸಂಪತ್ತನ್ನೂ ಇಂದು ಪಾರ್ಥರು, ಚಾರಣ-ಸಿದ್ಧರೊಂದಿಗೆ ನೋಡಲಿ. ಇಂದು ನನ್ನ ವಿಕ್ರಮವನ್ನು ನೋಡಿ ಮಹಾರಥ ಪಾಂಡವರು ಪ್ರತೀಕಾರಪರರಾಗಿ ಯುದ್ಧ ಮಾಡುವಂತಾಗಲಿ! ಇಂದು ನಾನು ಪಾಂಡವರ ಸೇನೆಗಳನ್ನು ಎಲ್ಲಕಡೆ ಓಡಿಸುತ್ತೇನೆ! ನಿನ್ನ ಪ್ರಿಯಾರ್ಥವಾಗಿ ಯುದ್ಧದಲ್ಲಿ ದ್ರೋಣ-ಭೀಷ್ಮರನ್ನೂ, ಸೂತಪುತ್ರನನ್ನೂ ಮೀರಿಸಿ ನಾನು ಯುದ್ಧಮಾಡುತ್ತಾ ರಣದಲ್ಲಿ ಚರಿಸುತ್ತೇನೆ!”

ಶಲ್ಯನು ಅಭಿಷಿಕ್ತನಾಗಲು ಕೌರವ ಸೇನೆಗಳು ಕರ್ಣನ ಕುರಿತಾದ ವ್ಯಸನವನ್ನು ಸ್ವಲ್ಪವೂ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ! ಮದ್ರರಾಜನ ಶರಣಕ್ಕೆ ಬಂದ ಸೈನಿಕರು ಹೃಷ್ಟರಾಗಿ ಸುಮನಸ್ಕರಾದರಲ್ಲದೇ ಪಾರ್ಥರು ಹತರಾದರೆಂದೇ ಭಾವಿಸಿದರು. ಹರ್ಷವನ್ನು ಪಡೆದ ಆ ಸೇನೆಯು ರಾತ್ರಿಯನ್ನು ಅಲ್ಲಿಯೇ ಸ್ವಸ್ಥಚಿತ್ತದಿಂದ ಸುಖವಾಗಿ ಮಲಗಿ ಕಳೆಯಿತು.

ಕೌರವ ಸೇನೆಯ ಆ ಶಬ್ಧವನ್ನು ಕೇಳಿದ ರಾಜಾ ಯುಧಿಷ್ಠಿರನು ಸರ್ವ ಕ್ಷತ್ರಿಯರೂ ಕೇಳುವಂತೆ ವಾರ್ಷ್ಣೇಯನಿಗೆ ಈ ಮಾತನ್ನಾಡಿದನು: “ಮಾಧವ! ಧಾರ್ತರಾಷ್ಟ್ರರು ಸರ್ವಸೇನೆಗಳಿಂದ ಪೂಜಿತನಾಗಿರುವ ಮಹೇಷ್ವಾಸ ಮದ್ರರಾಜ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿಕೊಂಡಿದ್ದಾರೆ. ಇದನ್ನು ಕೇಳಿ ಏನು ಉಚಿತವೋ ಅದನ್ನು ಮಾಡು. ನೀನು ನಮ್ಮ ನೇತಾರನೂ, ರಕ್ಷಕನೂ ಆಗಿರುವೆ. ಆದುದರಿಂದ ನಂತರ ಏನು ಮಾಡಬೇಕೆನ್ನುವುದನ್ನು ನಿಶ್ಚಯಿಸು!”

ವಾಸುದೇವನು ಜನಾಧಿಪನಿಗೆ ಹೇಳಿದನು: “ಭಾರತ! ಋತಾಯನನ ಮಗ ಶಲ್ಯನನ್ನು ಯಥಾತತ್ತ್ವವಾಗಿ ತಿಳಿದುಕೊಂಡಿದ್ದೇನೆ. ಅವನು ವೀರ್ಯವಾನನೂ, ಮಹಾತೇಜಸ್ವಿಯೂ, ಮಹಾತ್ಮನೂ, ವಿಶೇಷತಃ ಯುದ್ಧವಿಶಾರದನೂ, ಚಿತ್ರಯೋಧಿಯೂ, ಲಾಘವ ಸಂಯುಕ್ತನೂ ಆಗಿದ್ದಾನೆ. ಮದ್ರರಾಜನು ರಣದಲ್ಲಿ ಭೀಷ್ಮ, ದ್ರೋಣ ಮತ್ತು ಕರ್ಣರು ಹೇಗಿದ್ದರೋ ಹಾಗೆ ಅಥವಾ ಅವರಿಗಿಂತಲೂ ವಿಶಿಷ್ಟನಾಗಿದ್ದಾನೆ ಎಂದು ನನಗನ್ನಿಸುತ್ತದೆ. ಎಷ್ಟು ಯೋಚಿಸಿದರೂ ಯುದ್ಧಮಾಡುತ್ತಿರುವ ಅವನ ಸಮಾನರೂಪನಾಗಿರುವ ಯೋಧನನ್ನು ನಾನು ಕಾಣುತ್ತಿಲ್ಲ. ರಣದಲ್ಲಿ ಅವನು ಶಿಖಂಡಿ, ಅರ್ಜುನ, ಭೀಮಸೇನ, ಸಾತ್ವತ ಮತ್ತು ಧೃಷ್ಟದ್ಯುಮ್ನರಿಗಿಂತ ಅಧಿಕ ಬಲಶಾಲಿಯು. ಮದ್ರರಾಜನು ಸಿಂಹ-ಆನೆಗಳ ವಿಕ್ರಮವುಳ್ಳವನು. ಪ್ರಳಯಕಾಲದಲ್ಲಿ ಪ್ರಜೆಗಳ ಮೇಲೆ ಕ್ರುದ್ಧನಾಗಿರುವ ಕಾಲನಂತೆ ಅವನು ರಣದಲ್ಲಿ ಸಂಚರಿಸುತ್ತಾನೆ. ಶಾರ್ದೂಲಸಮವಿಕ್ರಮಿಯಾದ ನಿನ್ನನ್ನು ಬಿಟ್ಟರೆ ಅವನನ್ನು ಇಂದು ರಣದಲ್ಲಿ ಎದುರಿಸುವ ಬೇರೆ ಯಾವ ಯೋಧನನ್ನೂ ನಾನು ಕಾಣಲಾರೆ! ರಣದಲ್ಲಿ ಕ್ರುದ್ಧನಾಗಿ ಪ್ರತಿದಿನವೂ ಯುದ್ಧಮಾಡುತ್ತಾ ನಿನ್ನ ಸೇನೆಯನ್ನು ಕ್ಷೋಭೆಗೊಳಿಸುತ್ತಿರುವ ಮದ್ರರಾಜನನ್ನು ಸಂಹರಿಸಬಲ್ಲ ನಿನ್ನಂತಹ ಪುರುಷನು ದೇವಲೋಕವೂ ಸೇರಿ ಇಡೀ ಜಗತ್ತಿನಲ್ಲಿಯೇ ಇಲ್ಲ. ಆದುದರಿಂದ ಮಘವಾನನು ಶಂಬರನನ್ನು ಹೇಗೋ ಹಾಗೆ ರಣದಲ್ಲಿ ಶಲ್ಯನನ್ನು ಸಂಹರಿಸು. ಅವನು ಅತಿ ವೀರನೂ ಧಾರ್ತರಾಷ್ಟ್ರರಿಂದ ಸತ್ಕೃತನೂ ಆಗಿದ್ದೇನೆ. ಯುದ್ಧದಲ್ಲಿ ಮದ್ರೇಶ್ವರನು ಹತನಾದನೆಂದರೆ ನಿನಗೇ ಜಯವೊದಗುತ್ತದೆ. ಅವನು ಹತನಾದರೆ ಧಾರ್ತರಾಷ್ಟ್ರರ ಮಹಾ ಸೇನೆಯಲ್ಲವೂ ಹತಗೊಂಡಂತೆ. ನನ್ನ ಈ ಮಾತನ್ನು ಕೇಳಿ ನನ್ನ ಸಲಹೆಯಂತೆ ರಣದಲ್ಲಿ ಮಹಾಬಲ ಮದ್ರರಾಜನನ್ನು ಎದುರಿಸಿ ಯುದ್ಧಮಾಡಿ ವಾಸವನು ನಮುಚಿಯನ್ನು ಹೇಗೋ ಹಾಗೆ ಅವನನ್ನು ಸಂಹರಿಸು! ನನ್ನ ಮಾತುಲನಿವನು ಎಂದು ಅವನ ಮೇಲೆ ದಯವನ್ನು ತೋರಿಸದೆಯೇ ಕ್ಷತ್ರಧರ್ಮವನ್ನು ಪುರಸ್ಕರಿಸಿ ಮದ್ರಜನೇಶ್ವರನನ್ನು ಸಂಹರಿಸು. ಭೀಷ್ಮ-ದ್ರೋಣರೆಂಬ ಮಹಾ ಸಾಗರವನ್ನೂ, ಕರ್ಣನೆಂಬ ಪಾತಾಳದಂತಹ ಅಗಾಧ ಮಡುವನ್ನೂ ದಾಟಿದ ನೀನು ಶಲ್ಯನೆಂಬ ಗೋವಿನ ಪಾದದಷ್ಟಿರುವ ಗುಂಡಿಯಲ್ಲಿ ಗಣಸಮೇತನಾಗಿ ಮುಳುಗಿಹೋಗಬೇಡ! ನಿನ್ನಲ್ಲಿರುವ ತಪಸ್ಸು, ವೀರ್ಯ, ಮತ್ತು ಕ್ಷಾತ್ರಬಲಗಳೆಲ್ಲವನ್ನೂ ರಣದಲ್ಲಿ ತೋರಿಸಿ ಆ ಮಹಾರಥನನ್ನು ಸಂಹರಿಸು!”

ಈ ಮಾತುಗಳನ್ನು ಹೇಳಿ ಪರವೀರಹ ಕೇಶವನು ಪಾಂಡವರಿಂದ ಗೌರವಿಸಲ್ಪಟ್ಟು ಸಾಯಂಕಾಲದ ಹೊತ್ತಿಗೆ ತನ್ನ ಶಿಬಿರಕ್ಕೆ ಹೋದನು. ಕೇಶವನು ಹೊರಟು ಹೋಗಲು ಧರ್ಮರಾಜ ಯುಧಿಷ್ಠಿರನು ತನ್ನ ಭ್ರಾತೃಗಳನ್ನೂ, ಪಾಂಚಾಲ-ಸೋಮಕರೆಲ್ಲರನ್ನೂ ಕಳುಹಿಸಿ ಅಂಕುಶವಿಲ್ಲದ ಸಲಗದಂತೆ ಸುಖವಾಗಿ ಆ ರಾತ್ರಿ ನಿದ್ರಿಸಿದನು. ಕರ್ಣನ ನಿಧನದಿಂದ ಹೃಷ್ಟರಾಗಿದ್ದ ಮಹೇಷ್ವಾಸ ಪಾಂಚಾಲ-ಪಾಂಡವರೆಲ್ಲರೂ ಆ ರಾತ್ರಿ ಸುಖವಾಗಿ ನಿದ್ರಿಸಿದರು. ಸೂತಪುತ್ರನ ನಿಧನದಿಂದಾಗಿ ಜಯವನ್ನು ಪಡೆದ ಪಾಂಡವ ಸೇನೆಯು, ಕರ್ಣನಂತಹ ಮಹಾರಥ ಮಹೇಷ್ವಾಸನನ್ನು ದಾಟಿ ಚಿಂತೆಗಳನ್ನು ಕಳೆದುಕೊಂಡು ಆ ರಾತ್ರಿ ಅತ್ಯಂತ ಮುದಿತವಾಗಿತ್ತು.

Leave a Reply

Your email address will not be published. Required fields are marked *